ದಾವಣಗೆರೆ: ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ
ಪ್ರತಿಭಟಿಸಿದ್ದಾರೆ.
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಅಧಿಕಾರಕ್ಕೆ ಬಂದ ಒಂದು ದಿನದಲ್ಲಿ ರಾಜ್ಯದ ರೈತರ 53 ಸಾವಿರ ಕೋಟಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿರುವ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲಿಲ್ಲ. ಮೇ. 30ರಂದು ವಿಧಾನ ಸೌಧದಲ್ಲಿ ರೈತ ಮುಖಂಡರ ಸಭೆ ನಡೆಸಿ, 15 ದಿನದಲ್ಲಿ ಸಾಲ ಮನ್ನಾದ ಬಗ್ಗೆ ತಿಳಿಸಿದ್ದರು. 15 ದಿನಗಳ ಕಳೆದರೂ ಸಾಲ ಮನ್ನಾ ಮಾಡಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ. ಕೂಡಲೇ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ್ಯಾಂತ ನಡೆಸಿರುವ ಪ್ರತಿಭಟನೆಗೆ ಸ್ಪಂದಿಸಿ, ಸಾಲ ಮನ್ನಾ ಮಾಡಲೇಬೇಕು. ಇನ್ನೂ ವಿಳಂಬ ಮಾಡಿದಲ್ಲಿ ಹಂತ ಹಂತವಾಗಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕ್‌ಗಳು ಸಾಲ ಕಟ್ಟುವಂತೆ ನೋಟಿಸ್ ನೀಡುತ್ತಿವೆ. ಅನೇಕ ರೈತರು ಅಡವಿಟ್ಟಿರುವಂತಹ ಹೊಲ-ಮನೆ- ಬಂಗಾರದ ಹರಾಜಿನ ನೋಟಿಸ್ ಸಹ ಬಂದಿವೆ. ರಾಜ್ಯ ಸರ್ಕಾರ ಸಾಲ ಮನ್ನಾದ ಬಗ್ಗೆ ವಿಳಂಬ ಮಾಡುತ್ತಿರುವುದು
ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಗಾರು ಹಂಗಾಮಿನಲ್ಲೇ ಸಾಲ ಮನ್ನಾ ಮಾಡಿದಲ್ಲಿ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಮತ್ತೆ ಕೃಷಿ, ಬೆಳೆ ಸಾಲ ಪಡೆಯುವ ಅವಕಾಶ ದೊರೆಯುತ್ತದೆ. ಕೂಡಲೇ ಸಾಲ ಮನ್ನಾ
ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಕುರುಡಿ ಅರುಣ್‌ಕುಮಾರ್, ವಾಸನದ ಓಂಕಾರಪ್ಪ, ಇಟಗಿ ಬಸವರಾಜಪ್ಪ, ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಚಿಕ್ಕನಹಳ್ಳಿ ರೇವಣಸಿದ್ದಪ್ಪ, ನಾಗೇನಹಳ್ಳಿ ಹಾಲಪ್ಪ, ಜಿ. ಪ್ರಭುಗೌಡ, ಅಣಬೇರು ಅಣ್ಣಪ್ಪ, ಆನಗೋಡು ಭೀಮಣ್ಣ, ವಾಸನ ವಸಂತಪ್ಪ, ಚಿನ್ನಸಮುದ್ರ ಭೀಮಾನಾಯ್ಕ, ಅಶೋಕ್ ಇತರರು ಇದ್ದರು.