Advertisement

ದಶಕ ಕಳೆದರೂ ಮಂಜೂರಾಗಿಲ್ಲ 2ನೇ ಹಂತದ ಕಾಮಗಾರಿ

06:00 AM Sep 08, 2018 | |

ಗಂಗೊಳ್ಳಿ: ಕುಂದಾಪುರದ ಪ್ರಮುಖ ಮೀನುಗಾರಿಕಾ ನೆಲೆಯಾದ ಗಂಗೊಳ್ಳಿಯ ಬಂದರಿನ ಕಟ್ಟಡದ ಶೀಟು ಹಾರಿ ಹೋಗಿ, ಜೆಟ್ಟಿಯ ಸ್ಲ್ಯಾಬ್ ಕುಸಿದು ತಿಂಗಳುಗಳೇ ಕಳೆದಿವೆ. ಯಾಂತ್ರೀಕೃತ ಬೋಟುಗಳು, ದೋಣಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎರಡನೇ ಹಂತದ ಕಾಮಗಾರಿಯ ಅವಶ್ಯಕತೆಯಿದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಕೆಯಾದರೂ ಕೂಡ ಇದನ್ನು ಸರಿಪಡಿಸಬೇಕಾದವರೂ ಮಾತ್ರ ಇನ್ನೂ ಇತ್ತ ಗಮನವೇ ಕೊಟ್ಟಿಲ್ಲ. 

Advertisement

ಮೀನುಗಾರಿಕಾ ರಜೆಯ ಅವಧಿ ಮುಗಿದು ಈಗಷ್ಟೇ ಹೊಸ ಮೀನುಗಾರಿಕಾ ಋತು ಆರಂಭವಾಗಿದೆ. ಆದರೆ ಅದಕ್ಕೂ ಮುನ್ನ ಆಗಬೇಕಾದ ಕಾಮಗಾರಿ ಮಾತ್ರ ಇನ್ನೂ ಆಗಿಲ್ಲ.

ಎರಡನೇ ಹಂತದ ಕಾಮಗಾರಿ ಎಂದು?
ಈ ಬಂದರು 2007 ರಲ್ಲಿ ಸುಮಾರು 9.21 ಕೋ.ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಈಗ ವರ್ಷದಿಂದ ವರ್ಷಕ್ಕೆ ಯಾಂತ್ರೀಕೃತ ಬೋಟುಗಳು, ದೋಣಿಗಳು, ಹಾಗೂ ಇದರ ಗಾತ್ರ ಕೂಡ ಹೆಚ್ಚಾಗಿರುವುದರಿಂದ ಧಕ್ಕೆಯಲ್ಲಿ ಇದರ ನಿಲುಗಡೆಗೆ ಜಾಗದ ಕೊರತೆಯಿದೆ. ಇದರಿಂದ ಶೀಘ್ರ ಎರಡನೇ ಹಂತದ ಕಾಮಗಾರಿಯ ಅಗತ್ಯತೆಯಿದೆ. 

ಮೊದಲ ಹಂತದ ಕಾಮಗಾರಿ ನಡೆದು ಸುಮಾರು 12 ವರ್ಷಗಳು ಕಳೆದರೂ, ಎರಡನೇ ಹಂತದ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಇನ್ನಾದರೂ ಇತ್ತ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಲಿ. ಉಡುಪಿ ಜಿಲ್ಲೆಯ ಎರಡನೇ ದೊಡ್ಡ ಮೀನುಗಾರಿಕಾ ಬಂದರಿನ ಅಭಿವೃದ್ಧಿಗೆ ಮುಂದಾಗಲಿ. 

ಗಂಗೊಳ್ಳಿ ಬಂದರಿನ ಪ್ರಮುಖ ಸಮಸ್ಯೆಗಳು
ಈ ಸಮಸ್ಯೆಗಳ ಪಟ್ಟಿಯಲ್ಲಿರುವ ಹೆಚ್ಚಿನೆಲ್ಲದರ ಕುರಿತಾಗಿ ಈಗಾಗಲೇ ಗಂಗೊಳ್ಳಿಯ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಸರಕಾರಕ್ಕೆ ಕರಡು ಸಿದ್ದಪಡಿಸಿ, ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಮಂಜೂರಾತಿ ಸಿಕ್ಕಿಲ್ಲ. 

Advertisement

– ಜೆಟ್ಟಿಯ ಹಲವೆಡೆ ಸ್ಲ್ಯಾಬ್ಗಳು ಕುಸಿದಿದ್ದು, ತ್ವರಿತ ಕಾಮಗಾರಿ ಆಗಬೇಕಾಗಿದೆ.
– ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಆಗಬೇಕಾಗಿದೆ.
– ಬ್ರೇಕ್‌ವಾಟರ್‌ 300 ಮೀಟರ್‌ ವಿಸ್ತರಣೆ.
– ಕಿರು ಬಂದರು ಮುಂಭಾಗದಲ್ಲಿ ಹೂಳೆತ್ತದಿರುವುದರಿಂದ ನಿರ್ಮಾಣವಾಗಿ 3 ವರ್ಷ ಕಳೆದರೂ ಉಪಯೋಗಕ್ಕೆ ಬಂದಿಲ್ಲ. 
– ಬಂದರು ಇಲಾಖೆಯ ಸುಪರ್ದಿಯಲ್ಲಿರುವ ಮ್ಯಾಂಗನೀಸ್‌ ವಾರ್ಫ್‌ ಜಾಗವನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿದರೆ, ಬೋಟುಗಳ ನಿಲುಗಡೆಗೆ ಪ್ರಯೋಜನವಾಗಲಿದೆ.
–  ಬಂದರಿಗೆ ತುರ್ತಾಗಿ ಹೈಮಾಸ್ಕ್ ದೀಪ
–  ಮೀನುಗಾರ ಮಹಿಳೆಯರಿಗೆ ವಿಶ್ರಾಂತಿ ಗೃಹದ ಅವಶ್ಯಕತೆಯಿದೆ.
– ಈಗ ಬಂದರು ಪ್ರದೇಶದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ.
– ಬಂದರಿನಲ್ಲಿ ಪ್ರತ್ಯೇಕ ಪುರುಷ ಹಾಗೂ ಮಹಿಳೆಯರ ಶೌಚಾಲಯ ನಿರ್ಮಾಣದ ಅಗತ್ಯವಿದೆ.
– ಭದ್ರತೆ ದೃಷ್ಟಿಯಿಂದ ಬಂದರು ಸುತ್ತ ಆವರಣ ಗೋಡೆಯ ಅವಶ್ಯಕವಿದೆ.
– ವಾಹನ ನಿಲುಗಡೆಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ.
– ಮೀನುಗಾರಿಕಾ ಬಂದರಿನ ಜೆಟ್ಟಿಯ ಭಾಗದಲ್ಲಿ ಹೂಳೆತ್ತಬೇಕಿದೆ. 
– ಎಕ್ಸ್‌ಪೋರ್ಟ್‌ ಇನ್‌ಸ್ಪೆಕ್ಷನ್‌ ಮಾನದಂಡದಂತೆ ಚರಂಡಿ ವ್ಯವಸ್ಥೆಯಾಗಬೇಕಿದೆ.

ಇಲಾಖೆ, ಸಚಿವರಿಗೆ ಮನವಿ
ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ

ಗಂಗೊಳ್ಳಿ ಬಂದರಿನಲ್ಲಿರುವ ಕಟ್ಟಡದ ಮಾಡಿನ ದುರಸ್ತಿ, ಸ್ಲಾéಬ್‌ ಕಾಮಗಾರಿ ಹಾಗೂ ಬಂದರಿನ ಇನ್ನಿತರ ಅಭಿವೃದ್ಧಿ ಕಾಮಗಾರಿ ಕುರಿತಂತೆ ಈಗಾಗಲೇ ಕರಡು ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲಾಗಿದೆ. ಮೀನುಗಾರಿಕಾ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. 
– ಅಂಜನಾದೇವಿ, ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next