ಚಿಕ್ಕಮಗಳೂರು: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್. ಎಚ್.ದೇವರಾಜ್ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಜು.27 ರೊಳಗೆ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, 23ಲಕ್ಷ ಬಡ ಕುಟುಂಬಗಳು ನೆಲೆ ಕಳೆದುಕೊಳ್ಳುತ್ತವೆ. ಕೇಂದ್ರ ಸರ್ಕಾರವೇ ಇದರ ಹೊಣೆ ಹೊರಬೇಕೆಂದು ತಿಳಿಸಿದರು.
16 ರಾಜ್ಯಗಳ 10ಲಕ್ಷ ಕುಟುಂಬಗಳನ್ನು ಅರಣ್ಯ ಪ್ರದೇಶದಿಂದ ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ. ಬುಡಕಟ್ಟು ಸಚಿವಾಲಯದ ದತ್ತಾಂಶದ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ತಮ್ಮ ಒಡೆತನ ಪ್ರತಿಪಾದಿಸಿ 42.19ಲಕ್ಷ ಕುಟುಂಬ ಮನವಿ ಸಲ್ಲಿಸಿತ್ತು. ಅವುಗಳಲ್ಲಿ 18.89ಲಕ್ಷ ಮನವಿ ಪುರಸ್ಕರಿಸಲಾಗಿದೆ. 23ಲಕ್ಷ ಕುಟುಂಬಗಳು ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿವೆ ಎಂದರು.
ಅರಣ್ಯ ಹಕ್ಕು ಕಾಯ್ದೆಯಡಿ ಗೊಂಡ, ಮುಂಡಾ, ಡೋಂಗ್ರಿ ಬುಡಕಟ್ಟು ಸಮುದಾಯಗಳಿಗೆ ಮಾತ್ರ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೃಷಿ ಜೀವನೋಪಾಯ ಹಕ್ಕು ನೀಡಲಾಗಿತ್ತು. ಶೇ.2ರಷ್ಟು ಅರಣ್ಯವಾಸಿಗಳಿಗೆ ಮಾತ್ರವೆ ವಾಸಿಸಲು ಮಾನ್ಯತೆ ನೀಡಲಾಗಿದ್ದು, ಇತರರನ್ನು ಅಕ್ರಮವಾಸಿಗಳು ಎಂದು ಪರಿಗಣಿಸಲಾಗಿದೆ. 2006ರಲ್ಲಿ ಅರಣ್ಯ ಹಕ್ಕು ಸಿಂಧುತ್ವವನ್ನು ಪ್ರಶ್ನಿಸಿ ವನ್ಯಜೀವಿಗಳ ಸಂರಕ್ಷಣೆಗಾಗಿ ಎನ್.ಜಿ.ಒ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿಯೋಜಿಸಿದ್ದ ವಕೀಲ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಸುಮಾರು 10ಲಕ್ಷ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಇದರ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕು ಎಂದರು.
ಕೇಂದ್ರ ಸರ್ಕಾರ ಕಾನೂನಿಗೆ ತಿದ್ದುಪಡಿ ತಂದು ನಿರಾಶ್ರಿತ ಕುಟುಂಬಗಳನ್ನು ಉಳಿಸಬೇಕು. ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದ ಅವರು, ನಿರಾಶ್ರಿತರ ಸಹಾಯಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಹಾಗೂ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಚಳುವಳಿ, ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಅರಣ್ಯ ಇಲಾಖೆ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಇಂತಹ ವರ್ತನೆಯನ್ನು ಶಾಸಕರು ತಿದ್ದಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕು. ಅಧಿಕಾರಿಗಳು ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ವರ್ತಿಸುವುದು ಅವರಿಗೆ ಶೋಭೆ ತರುವುದಿಲ್ಲ.
ಗೂಂಡಾಗಿರಿ ವರ್ತನೆ ಶಾಸಕರ ನಡುವಳಿಕೆಯಲ್ಲ. ತಾವು ಸಾರ್ವಜನಿಕರಿಂದ ಆಯ್ಕೆ ಅದವರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಜೆಡಿಎಸ್ ಮುಖಂಡರಾದ ಚಂದ್ರಪ್ಪ, ರಮೇಶ್, ಜಮೀಲ್ ಅಹ್ಮದ್, ಮಂಜಪ್ಪ, ಲಕ್ಷ್ಮಣ, ಜಯರಾಜ್ ಅರಸ್ ಇದ್ದರು.