Advertisement

ಕೈದಿ ಸಾವಿಗೆ ಜೈಲು ಅಧಿಕಾರಿಗಳ ಹಲ್ಲೆ ಕಾರಣ?

01:20 AM May 20, 2019 | Lakshmi GovindaRaj |

ಬೆಂಗಳೂರು: ವಿಚಾರಣಾಧೀನ ಕೈದಿಯಾಗಿದ್ದ ಯುವಕನ ನೇಲೆ ಹಲ್ಲೆನಡೆಸಿ ಕೊಲೆಮಾಡಿದ ಆರೋಪದ ಉರುಳಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿಲುಕಿದ್ದಾರೆ.

Advertisement

ಅನಾರೋಗ್ಯ ಕಾರಣದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫ‌ಲಿಸದೆ ಜ.23ರಂದು ಮೃತಪಟ್ಟಿದ್ದ ಕೈದಿ ಸೈಯದ್‌ ಫೈರೋಜ್‌ (21) ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜೈಲು ಅಧಿಕಾರಿಗಳು, ಸಿಬ್ಬಂದಿ, ಇನ್ನಿತರರಿಂದ ಹಲ್ಲೆಗೊಳಗಾಗಿ ಸೈಯದ್‌ ಫೈರೋಜ್‌ ಮೃತಪಟ್ಟಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು, ಸಿಬ್ಬಂದಿ, ಇನ್ನಿತರರ ವಿರುದ್ಧ 120 ಬಿ (ಒಳಸಂಚು) 302 ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ನಿರ್ದಿಷ್ಟ ಜೈಲು ಅಧಿಕಾರಿ, ಸಿಬ್ಬಂದಿಯ ಹೆಸರನ್ನು ಆರೋಪಿಗಳನ್ನಾಗಿಸಿ ಉಲ್ಲೇಖೀಸಿಲ್ಲ.

ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಈ ಹಂತದಲ್ಲಿ ಆರೋಪಿಗಳನ್ನು ಗುರ್ತಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಆರೋಪಿಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಡಿ.ಜೆಹಳ್ಳಿಯ ಸೈಯದ್‌ ಫೈರೋಜ್‌ ಗಾಂಜಾ (ಮಾದಕ ವಸ್ತು) ಮಾರಾಟ ಆರೋಪ ಪ್ರಕರಣದಲ್ಲಿ ಬಂಧಿತನಾಗಿ 2018ರ ಜನವರಿ 21ರಂದು ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

Advertisement

ಜೈಲು ಅಧಿಕಾರಿಗಳು ಅನಾರೋಗ್ಯ ಕಾರಣದಿಂದ ಇದೇ ಜನವರಿ 21ರಂದು ಫೈರೋಜ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫ‌ಲಿಸದೆ ಜ.23ರಂದು ಮೃತಪಟ್ಟಿದ್ದರು.ಜೈಲು ಅಧಿಕಾರಿಗಳು ನೀಡಿದ ಈ ವರದಿ ಆಧರಿಸಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಅಸಹಜ ಸಾವು ಕೇಸ್‌ ದಾಖಲಿಸಿದ್ದರು.

ಮ್ಯಾಜಿಸ್ಟೇಟ್‌ ತನಿಖೆಯಲ್ಲಿ ಬಯಲಾದ ಸತ್ಯ!: ಸೈಯದ್‌ ಫೈರೋಜ್‌ ಸಾವಿಗೆ ಸಂಬಂಧಿಸಿದಂತೆ ನಡೆದ ಮ್ಯಾಜಿಸ್ಟ್ರೇಟ್‌ (ನ್ಯಾಯಾಧೀಶರು) ವಿಚಾರಣೆ ವೇಳೆ, ಫೈರೋಜ್‌ ಸಾವಿಗೆ ಜೈಲು ಪೊಲೀಸರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಹೇಳಿಕೆ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್‌ರು ನಿರ್ದೇಶಿಸಿತ್ತು.

ಜತೆಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿಯೂ ಮೃತ ಫೈರೂಜ್‌ ಮೈಮೇಲಿನ ಗಾಯಗಳಿಂದ ರಕ್ತವಿಷವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಈ ಅಂಶಗಳನ್ನು ಪರಿಶೀಲಿಸಿದಾಗ ಜೈಲು ಆಧಿಕಾರಿಗಳು, ಸಿಬ್ಬಂದಿ, ಇತರರ ಹಲ್ಲೆಯಿಂದ ಫೈರೋಜ್‌ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಇದೀ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಆಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next