ಬೆಂಗಳೂರು: ಕಲಾವಿದರ ಪರವಾದ ಯೋಜನೆಗಳೆಲ್ಲವನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರ್ಕಾರ ವಹಿಸಿಕೊಡಬೇಕು. ಆಗ ಕಲಾವಿದರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟ ವೈಜನಾಥ ಬಿರಾದಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ-183 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಾವಿದರಿಗೆ ಮಾಸಾಶನ, ನಿವೇಶನ, ಮನೆ ಇತ್ಯಾದಿ ಸವಲತ್ತುಗಳನ್ನು ನೀಡುವ ಯೋಜನೆಗಳು ಬೇರೆ ಬೇರೆ ಇಲಾಖೆಗಳಲ್ಲಿ ಹಂಚಿ ಹೋಗಿವೆ.
ಆ ಇಲಾಖೆ ಅಧಿಕಾರಿಗಳಿಗೆ ಕಲಾವಿದರ ಮಾಹಿತಿ ಇರುವುದಿಲ್ಲ. ಶಿಫಾರಸು ಮಾಡಿಸುವ ಶಕ್ತಿ ಕಲಾವಿದರಿಗಿರುವುದಿಲ್ಲ. ಆದ್ದರಿಂದ ಕಲಾವಿದರಿಗಾಗಿ ಇರುವ ಯೋಜನೆಗಳೆಲ್ಲವನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಿದರೆ ಸುಲಭವಾಗಿ ಅವು ಅರ್ಹ ಫಲಾನುಭವಿಗಳಿಗೆ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನನ್ನೆಲ್ಲ ಸಾಧನೆಗೆ ರಂಗಭೂಮಿಯೇ ಕಾರಣ. ಪವಿತ್ರವಾದ ರಂಗಭೂಮಿಯಲ್ಲಿ ಕಷ್ಟಪಟ್ಟಷ್ಟು ಯಶಸ್ಸು ಸಿಗುತ್ತದೆ. ಯಾವುದೇ ಕಾರಣಕ್ಕೂ ಕಲಾವಿದರು ದುಶ್ಚಟಗಳಿಗೆ ಬಲಿಯಾಗಬಾರದು. ಕಲಾವಿದರ ಬಗ್ಗೆ ಜನರಿಗೆ ಅಪಾರವಾದ ಪ್ರೀತಿ ಇರುತ್ತದೆ. ದುಶ್ಚಟಗಳಿದ್ದರೆ ಯಾರು ನಮ್ಮನ್ನು ನಂಬುವುದಿಲ್ಲ ಮತ್ತು ಪ್ರೀತಿಗಳಿಸಲು ಸಾಧ್ಯವಾಗುವುದಿಲ್ಲ.
ಕಲಾವಿದರಿಗೆ ಸಂಪತ್ತು ಬರದಿದ್ದರೂ ಪರವಾಗಿಲ್ಲ. ಆರೋಗ್ಯ, ಆಯಸ್ಸು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಲಾವಿದ ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಅಹಂಕಾರ ಬರಬಾರದು. ಪ್ರೇಕ್ಷಕರಿಂದ ಬರುವ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗೆ ತೆರೆದುಕೊಂಡಿರಬೇಕು. ನಿಂದನೆ ಸಹಿಸಿಕೊಳ್ಳುವ ಸಹನೆ ಆತನಿಗಿರಬೇಕಾದ ದೊಡ್ಡ ಗುಣ. ಅದೆಲ್ಲವನ್ನೂ ರಂಗಭೂಮಿ ಕಲಿಸಿದೆ.
ಪ್ರಸ್ತುತ ರಂಗಭೂಮಿ ಕಷ್ಟದಲ್ಲಿದ್ದು, ಅದನ್ನು ಪುನಶ್ಚೇತನಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ರಂಗಮಂಟಪ ಸ್ಥಾಪಿಸಿದರೆ ಕಲಾವಿದರಿಗೆ ಅನುಕೂಲವಾಗುತ್ತದೆ ಎಂದರು.ಕಳೆದ 30 ವರ್ಷಗಳಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟಿಸುತ್ತಿದ್ದೇನೆ.
ಈಗಲೂ ನನಗೆ ಸ್ವಂತ ಮನೆಯಿಲ್ಲ. ಒಬ್ಬ ಕಲಾವಿದನಿಗೆ ಆತನ ಪ್ರಮುಖ ಅಗತ್ಯತೆ ಈಡೇರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಮುಂದೆ ರಂಗಭೂಮಿಗೆ ಯಾರು ಬರುವುದಿಲ್ಲ. ಹಿರಿಯ ಕಲಾವಿದರಿಗೆ 1500 ಮಾಶಾಸನ ನೀಡುತ್ತಿದ್ದು, ಅದು ಯಾವುದಕ್ಕೂ ಸಾಲದು. ಸರ್ಕಾರ ಕಲಾವಿದರ ಬಗ್ಗೆ ಸ್ವಲ್ಪ ಉದಾರ ಮನೋಭಾವ ತಾಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಇದ್ದರು.