Advertisement
ಮೂರ್ನಾಡು ಎಂ.ಬಾಡಗ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದ ಮಾಜಿ ಸೈನಿಕ ಪಳಂಗಿಯಂಡ ಉತ್ತಪ್ಪ (62)ನೇ ಹಂತಕನಾಗಿದ್ದು, ಪಳಂಗಿಯಂಡ ದೇವಯ್ಯ (66) ಹಾಗೂ ಅವರ ಪತ್ನಿ ಪ್ರೇಮಾ ದೇಚಮ್ಮ (53) ಗುಂಡೇಟಿಗೆ ಬಲಿಯಾದವರು.
ಸಹೋದರರಾಗಿದ್ದ ಪಳಂಗಿಯಂಡ ದೇವಯ್ಯ ಮತ್ತು ಉತ್ತಪ್ಪ ನಡುವೆ ಕುಟುಂಬದ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಎಂಟು ವರ್ಷಗಳಿಂದ ವಿವಾದವಿತ್ತು. ಈ ಕುರಿತು ಸಹೋದರರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆಯೂ ಹಲವು ಬಾರಿ ಇವರ ನಡುವೆ ಜಗಳ ನಡೆದಿತ್ತು. ಆಗ ಕುಟುಂಬಸ್ಥರೇ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿದ್ದರು. ಮೈಸೂರಿನಲ್ಲಿ ನೆಲೆಸಿದ್ದ ಉತ್ತಪ್ಪ ಕಾಫಿ, ಕರಿಮೆಣಸು ಕೊಯ್ಲು ಸಂದರ್ಭ ಮೂರ್ನಾಡಿಗೆ ಆಗಮಿಸಿ ಕೊಯ್ಲು ಮುಗಿದ ಬಳಿಕ ಮೈಸೂರಿಗೆ ತೆರಳುತ್ತಿದ್ದರು.
Related Articles
Advertisement
ಶನಿವಾರ ಬೆಳಗ್ಗೆ ದೇವಯ್ಯ ಮತ್ತು ಅವರ ಪತ್ನಿ ಪ್ರೇಮಾ ದೇಚಮ್ಮ ಕಾರ್ಮಿಕರೊಂದಿಗೆ ಕಾಫಿ ಮತ್ತು ಕರಿಮೆಣಸು ಕೊಯ್ಲು ಮಾಡುತ್ತಿದ್ದುದ್ದನ್ನು ಗಮನಿಸಿದ ಉತ್ತಪ್ಪ ಸುಮಾರು 9.15 ಗಂಟೆಗೆ ಏಕಾಏಕಿ ಅವರ ಮೇಲೆ ಡಬ್ಬಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ದೇವಯ್ಯ ಅವರ ಹೊಟ್ಟೆಭಾಗಕ್ಕೆ ಮತ್ತು ಪ್ರೇಮಾ ಅವರ ಬೆನ್ನಿಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲಿಂದ ಬಂದೂಕಿನೊಂದಿಗೆ ತೆರಳಿದ ಉತ್ತಪ್ಪ ತನ್ನ ಮನೆಯ ಮುಂದಿನ ಕಾಫಿ ತೋಟದಲ್ಲಿ ಸ್ವಯಂ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡರು. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ತತ್‌ಕ್ಷಣವೇ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್, ಉಪನಿರೀಕ್ಷಕ ಭೋಜಪ್ಪ, ಎಎಸ್‌ಐ ಅಲೆಕ್ಸ್ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಮಹಜರು ನಡೆಸಿದರು. ಕೃತ್ಯಕ್ಕೆ ಬಳಸಿದ ಡಬ್ಬಲ್ ಬ್ಯಾರಲ್ ಬಂದೂಕು, 3 ಸಿಡಿದ ಕಾಡತೂಸು ಮತ್ತು ಒಂದು ಜೀವಂತ ಕಾಡತೂಸನ್ನು ವಶಕ್ಕೆ ಪಡೆದಿದ್ದಾರೆ.
ಮೃತ ದೇವಯ್ಯ -ಪ್ರೇಮಾ ದಂಪತಿ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉತ್ತಪ್ಪ ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.