Advertisement

ಪಾಲಿಕೆಗೆ ಆಸ್ತಿ  ತೆರಿಗೆ ಪಾವತಿಸುವಷ್ಟರಲ್ಲಿ ಕರದಾತ ಹೈರಾಣ!

03:44 PM Apr 14, 2018 | Team Udayavani |

ಹುಬ್ಬಳ್ಳಿ: ಆದಾಯ ಕೊರತೆಯಿಂದಾಗಿ ಮಹಾನಗರ ಪಾಲಿಕೆ ನಿವೃತ್ತರಿಗೆ ಪಿಂಚಣಿ ನೀಡುತ್ತಿಲ್ಲ, ಗುತ್ತಿಗೆದಾರರ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ ಆಸ್ತಿ ತೆರಿಗೆ ಮೂಲಕ ಆದಾಯ ಪಡೆದುಕೊಳ್ಳಲು ಸಮರ್ಪಕ ಸಿದ್ಧತೆ ಮಾಡಿಕೊಳ್ಳುವಲ್ಲಿ ಪಾಲಿಕೆ ಅಧಿಕಾರಿಗಳು ಎಡವಿದ್ದಾರೆ.

Advertisement

ಏಪ್ರಿಲ್‌ ತಿಂಗಳಲ್ಲಿ ಆಸ್ತಿ ತೆರಿಗೆ ಭರಿಸಿದರೆ ಶೇ. 5ರಷ್ಟು ರಿಯಾಯಿತಿ ಸಿಗುತ್ತದೆ ಎಂದು ತೆರಿಗೆ ತುಂಬುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ವಲಯ ಕಚೇರಿಗೆ ಹೋದರೆ ಸರ್ವರ್‌ ಡೌನ್‌ ಹಾಗೂ ಸಿಬ್ಬಂದಿ ಚುನಾವಣೆ ಕಾರ್ಯಕ್ಕೆ ತೆರಳಿದ್ದಾರೆ ಎಂಬ ಉತ್ತರಗಳಿಂದ ಜನರು ಬೇಸತ್ತಿದ್ದಾರೆ. ವಲಯ ಕಚೇರಿಗಳಲ್ಲಿ ಆಸ್ತಿಕರ ಪಾವತಿಗೆ ತಾಂತ್ರಿಕ ತೊಂದರೆಯಾಗಿದ್ದು, ಜನರು ಸಹಕರಿಸಬೇಕೆಂಬ ಚೀಟಿ ಅಂಟಿಸಲಾಗಿದೆ. ಇದರಿಂದ ಪ್ರತಿದಿನ ತೆರಿಗೆದಾತರು ಕಚೇರಿಗೆ ಎಡತಾಕುವಂತಾಗಿದೆ. ಸಂಜೆವರೆಗೂ ಸರದಿಯಲ್ಲಿ ನಿಂತರೆ ಚಲನ್‌ ಸಿಗುವ ಖಾತ್ರಿಯಿಲ್ಲವಾಗಿದೆ. ಸಾಫ್ಟ್ವೇರ್‌ ಅಪ್‌ಡೇಟ್‌ ಮಾಡಿಕೊಳ್ಳದ್ದರಿಂದ ಜನರು ತೆರಿಗೆ ಪಾವತಿಸಲು ಸಿದ್ಧರಾಗಿದ್ದರೂ ಪಾಲಿಕೆ ತುಂಬಿಸಿಕೊಳ್ಳದ ಸ್ಥಿತಿಯಲ್ಲಿದೆ.

ಏಪ್ರಿಲ್‌ 5ರಿಂದ ಆಸ್ತಿ ತೆರಿಗೆ ಭರಿಸಿಕೊಳ್ಳಲಾಗುತ್ತಿದೆ. ಆದರೆ ಆರಂಭದ ದಿನದಿಂದಲೂ ಒಂದಿಲ್ಲೊಂದು ಕಾರಣದಿಂದ ತೆರಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಸರ್ವರ್‌ ಡೌನ್‌ ಎಂಬ ಕಾರಣ ಹೇಳಿ ಕಳಿಸಲಾಗುತ್ತದೆ. ಕೈಯಿಂದ ಚಲನ್‌ ಬರೆದು ಕೊಟ್ಟು ಆಸ್ತಿ ತೆರಿಗೆ ತುಂಬಿಸಿಕೊಳ್ಳುವಂತೆ ಕೇಳಿದರೆ ಚುನಾವಣಾ ಕಾರ್ಯದ ನಿಮಿತ್ತ ಸಿಬ್ಬಂದಿ ತೆರಳಿದ್ದು, ಸಿಬ್ಬಂದಿ ಕೊರತೆಯ ಕಾರಣ ಹೇಳಲಾಗುತ್ತದೆ. ಪ್ರತಿ ವಲಯಕ್ಕೆ ಐಟಿ ತಾಂತ್ರಿಕ ಸಹಾಯಕರು ಇಲ್ಲದಿದ್ದರಿಂದ ಸಮಸ್ಯೆ ಉಲ್ಬಣಿಸುವಂತಾಗಿದೆ. ಕೆಲ ವಲಯ ಕಚೇರಿಗಳಲ್ಲಿ 4-5 ದಿನಗಳಾದರೂ ಸಮಸ್ಯೆ ಬಗೆಹರಿಸದಿರುವುದು ಖಂಡನೀಯವಾಗಿದೆ.

ಚುನಾವಣೆಯ ಕಾರಣದಿಂದ ಸಿಬ್ಬಂದಿ ಕೊರತೆಯಾಗಿದ್ದರೆ ಶೇ.5 ರಿಯಾಯಿತಿಯನ್ನು ಮೇವರೆಗೂ ಮುಂದುವರಿಸಬೇಕು. ತಾಂತ್ರಿಕ ತೊಂದರೆಯಾದರೂ ರಿಯಾಯಿತಿ ನೀಡಿಕೆ ಕಾಲಾವಧಿ ಹೆಚ್ಚಿಸಬೇಕು ಎಂಬುದು ಕರದಾತರ ಆಗ್ರಹವಾಗಿದೆ. ಮೇ ತಿಂಗಳಲ್ಲಿ ರಿಯಾಯಿತಿ ಇಲ್ಲದೇ ತುಂಬಬಹುದಾದರೆ ಜೂನ್‌ನಿಂದ ದಂಡ ಸಹಿತ ತೆರಿಗೆ ಭರಿಸಬೇಕಾಗುತ್ತದೆ.

ಆನ್‌ಲೈನ್‌ ಪಾವತಿ ಅಯೋಮಯ: ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದೆಂದು ಕಸ ಸಂಗ್ರಹ ವಾಹನದಲ್ಲಿ ಪ್ರಚಾರ ಮಾಡಲಾಗುತ್ತದೆ. ಆದರೆ ಆನ್‌ ಲೈನ್‌ ತೆರಿಗೆ ಪಾವತಿ ಸಾಧ್ಯವಾಗುತ್ತಿಲ್ಲ. ಆಸ್ತಿ ವಿವರ ಸಿಗುತ್ತದೆ, ಆದರೆ ತೆರಿಗೆ ಮೊತ್ತ ತೋರಿಸುವುದಿಲ್ಲ. ಅಪ್‌ ಡೇಟ್‌ ಪೆಂಡಿಂಗ್‌ ಎಂದು ಬರುವುದರಿಂದ ಜನರು ರೋಸಿ ಹೋಗಿದ್ದಾರೆ. ಸರ್ವರ್‌ ಸಮಸ್ಯೆ ತಪ್ಪಿಸಿಕೊಳ್ಳಲು ಆನ್‌ಲೈನ್‌ ಮೂಲಕ ಪಾವತಿಸಬೇಕೆನ್ನುವವರಿಗೂ ಭರಿಸುವುದು ಸಾಧ್ಯವಾಗುತ್ತಿಲ್ಲ ಆದ್ದರಿಂದ ತೆರಿಗೆ ಪಾವತಿಸುವವರು ಪರದಾಡುವಂತಾಗಿದೆ.

Advertisement

ಬೆಳಗ್ಗೆ 8 ಗಂಟೆಗೆ ಬಂದು ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಸರದಿಯಲ್ಲಿ ನಿಂತರೆ ತೆರಿಗೆ ಪಾವತಿಸಿಕೊಳ್ಳಲಾಗುತ್ತದೆ ಎಂಬ ಖಾತ್ರಿ ಇಲ್ಲ. ಹಿರಿಯ ನಾಗರಿಕರು ಕಚೇರಿಗೆ ಎಡತಾಕುವಂತಾಗಿದೆ ಎಂದು ನಾಗರಿಕರೊಬ್ಬರು ಅಳಲು ತೋಡಿಕೊಂಡರು.

ನವನಗರದಲ್ಲಿ ಪ್ರತಿಭಟನೆ
ಆಸ್ತಿ ತೆರಿಗೆ ತುಂಬಿಸಿಕೊಳ್ಳದೇ ಪಾಲಿಕೆ ಸಿಬ್ಬಂದಿ ಎಡತಾಕಿಸುತ್ತಿರುವುದರಿಂದ ಬೇಸತ್ತ ಜನರು ಪ್ರತಿಭಟನೆ ನಡೆಸಿದ ಘಟನೆ ನವನಗರದಲ್ಲಿ ನಡೆದಿದೆ. ನವನಗರದ ವಲಯ ಕಚೇರಿ ಸಂಖ್ಯೆ-4ರಲ್ಲಿ ಕಳೆದ 4 ದಿನಗಳಿಂದ ಆಸ್ತಿ ತೆರಿಗೆ ತುಂಬಲು ಬಂದವರಿಗೆ ತಾಂತ್ರಿಕ ತೊಂದರೆ ಕಾರಣದಿಂದ ತುಂಬಿಸಿಕೊಳ್ಳುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದರಲ್ಲದೇ ವಲಯಾಧಿಕಾರಿ ಡಿ.ಡಿ. ಮಾದರ ಚೇಂಬರ್‌ಗೆ ತೆರಳಿ ವ್ಯವಸ್ಥೆ ಮಾಡಲು ಆಗ್ರಹಿಸಿದರು. ನಂತರ ಸಾರ್ವಜನಿಕರಿಂದ ಹೆಸರು, ಪಿಐಡಿ ಸಂಖ್ಯೆ, ಮೊಬೈಲ್‌ ಸಂಖ್ಯೆ ಪಡೆದುಕೊಂಡು 2-3 ದಿನಗಳಲ್ಲಿ ಚಲನ್‌ ಒದಗಿಸುವ ಭರವಸೆ ನೀಡಲಾಯಿತು.

ತೆರಿಗೆ ತುಂಬಲು ಬರುವವರಿಂದ ಭರಿಸಿಕೊಳ್ಳಲು ಆದ್ಯತೆ ನೀಡಬೇಕು. ಸಮಸ್ಯೆಯನ್ನು ಆಯುಕ್ತರ ಗಮನಕ್ಕೆ ತರಲಾಗುವುದು. ಕೂಡಲೇ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಜನರಿಗೆ ಅನುಕೂಲ ಕಲ್ಪಿಸುವಂತೆ ವಲಯಾಧಿಕಾರಿಗಳಿಗೆ ಸೂಚಿಸಲಾಗುವುದು.
ಸುಧೀರ ಸರಾಫ‌, ಮಹಾಪೌರ 

Advertisement

Udayavani is now on Telegram. Click here to join our channel and stay updated with the latest news.

Next