ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿ, ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಆದೇಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಿನಾಯಕ ಬಾಳಿಗ ತಂದೆ ರಾಮಚಂದ್ರ ಬಾಳಿಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ , ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಆರೋಪಿಯನ್ನು ಮಂಪರು ಪರೀಕ್ಷೆ ಹಾಗೂ ಫಾಲೀಗ್ರಾಫ್ ಒಳಪಡಿಸಲು ಇಚ್ಛಿಸಿದರೇ, ಆರೋಪಿಯೂ ಇದಕ್ಕೆ ಅನುಮತಿ ನೀಡಬೇಕು.
ಇಲ್ಲವಾದರೆ ಮಂಪರು ಪರೀಕ್ಷೆಗೆ ಒಳಪಡಿಸಲು ಆದೇಶಿಸುವಂತಿಲ್ಲ. ಈ ಪ್ರಕರಣದಲ್ಲಿಯೂ ಆರೋಪಿ ಸಮ್ಮತಿ ನೀಡಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. ಜೊತೆಗೆ ಅರ್ಜಿದಾರರು ಅಗತ್ಯವೆನಿಸಿದರೇ ಸುಪ್ರೀಂಕೋರ್ಟ್ ಮೊರೆಹೋಗಬಹುದು ಎಂದು ತಿಳಿಸಿತು.
2016ರ ಮಾರ್ಚ್ 21ರಂದು ಕೋಡಿಯಾಲ್ ಬೈಲ್‌ನಲ್ಲಿ ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಎರಡನೇ ಜೆಎಂಎಫ್ಸಿ ಕೋರ್ಟ್ ವಜಾಗೊಳಿಸಿತ್ತು.
ಇದಾದ ಬಳಿಕ ಬಾಳಿಗ ತಂದೆ ರಾಮಚಂದ್ರ ಬಾಳಿಗ, ತನ್ನ ಮಗ ಬಾಳಿಗ ಕೊಲೆ ವ್ಯವಸ್ಥಿತ ಸಂಚಿನ ಭಾಗವಾಗಿದೆ. ಹೀಗಾಗಿ ಆರೋಪಿ ನರೇಶ್ ಶೆಣೈನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೇ ಸತ್ಯಾಂಶ ಹೊರಬರಲಿದೆ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದ.ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ನಿಟ್ಟಿನಲ್ಲಿ ಹೈಕೋರ್ಟ್ ಮೊರೆಹೋಗಲಾಗಿತ್ತು.