ಶಿರಹಟ್ಟಿ: ಸೋಮವಾರ ಸಾಯಂಕಾಲದಿಂದ ಸುರಿದ ಕುಂಭದ್ರೋಣ ಮಳೆ ತಾಲೂಕಿನಲ್ಲಿ ಅವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ತಾಲೂಕಿನಲ್ಲಿ ಅಂದಾಜು 85 ಕ್ಕೂ ಅಧಿಕ ಮನೆಗಳು ಬಿದ್ದಿವೆ. ರೈತರ ಹೊಲಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳು ಸೋರುತ್ತಿವೆ. ಕೆಲವು ಮನೆಗಳು ಬಿದ್ದಿವೆ. ಇನ್ನು ಕೆಲವು ಬೀಳುವ ಸ್ಥಿತಿ ತಲುಪಿ ಆತಂಕ ಸೃಷ್ಟಿಸಿವೆ.
ಹೊಲಗದ್ದೆ ಜಲಾವೃತ:
ತಾಲೂಕಿನಾದ್ಯಂತವಾಗಿ ಸೋಮವಾರ ಸುರಿದ ಭಾರೀ ಮಳೆಯಿಂದಾಗಿ ರೈತರು ಮತ್ತು ಸಾಮಾನ್ಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಹಿಂದೆಂದೂ ಕಂಡರಿಯದ ಮಳೆಯಿಂದಾಗಿ ಆತಂಕದ ಛಾಯೆ ಮನೆ ಮಾಡಿದೆ. ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕೆರೆ-ಹಳ್ಳಕೊಳ್ಳ ಭರ್ತಿ: ಶಿರಹಟ್ಟಿ ತಾಲೂಕಿನಾದ್ಯಂತ ಎಲ್ಲ ಸಣ್ಣ ಪುಟ್ಟ ಹಳ್ಳಗಳು ಮತ್ತು ಸಣ್ಣ ಪುಟ್ಟ ಕೆರೆಗಳು ಮತ್ತು ದೊಡ್ಡ ಕೆರೆಗಳು ತುಂಬ ಕೋಡಿ ಬಿದ್ದು, ಹೊಲ ಗದ್ದೆಗಳಲ್ಲಿ ನೀರು ನಿಂತಿದೆ. ಕೋಡಿ ಬಿದ್ದ ಪರಿಣಾಮ ಕೆಲ ಸೇತುವೆಗಳು ಕಿತ್ತು ಹೋಗಿವೆ. ಇನ್ನು ಕೆಲ ಹಳ್ಳಗಳು ಮೈದುಂಬಿ ಹರಿಯುತ್ತಿರುವುದರಿಂದ ಗ್ರಾಮಗಳೇ ಜಲಾವೃತವಾಗುವ ಭೀತಿ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಕಲ್‌ಗೌಡ ಪಾಟೀಲ್ ಅವರು, ಜೆಲ್ಲಿಗೇರಿ ತಾಂಡಾದಲ್ಲಿ 40 ಮನೆಗಳಲ್ಲಿ ನೀರು ನುಗ್ಗಿದೆ. ಮಜೂjರ ಕೆರೆ ಶೇ.97 ತುಂಬಿದ್ದು, ಕೆರೆ ಕೆಳ ಪಾತ್ರದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ಕೊಡಲಾಗಿದೆ. ಸದ್ಯ ಕೆರೆ ಕೋಡಿ ಬಿದ್ದಿದೆ.
ಸಾಕಷ್ಟು ನೀರು ಹರಿದು ಹೋಗುತ್ತಿದೆ. ಬೂದಿಹಾಳ ತಾಂಡಾ 90 ಮನೆಗಳಿಗೆ ನೀರು ನುಗ್ಗಿದೆ. ಈಗಾಗಲೇ ಈ ಎರಡು ಹಳ್ಳಿಗಳಿಗೆ ತುರ್ತು ಕ್ರಮ ಜರುಗಿಸಲಾಗಿದೆ. ಈಗಾಗಲೇ ಬೂದಿಹಾಳ ಮತ್ತು ಮಜೂjರ ಗ್ರಾಮದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ಕೆಂದ್ರ ಮತ್ತು ರಾಜ್ಯ ಸರಕಾರಗಳ ನಿರ್ದೇಶನದ ಮೇರೆಗೆ ಮುಂದಿ ನಾಲ್ಕು ದಿನಗಳ ವರೆಗೆ ನದಿ, ಹಳ್ಳ, ಕೆರೆ, ಪಟ್ಟಾರೆ ನೀರು ಹರಿಯುವ ಪ್ರದೇಶಗಳ ಕಡೆಗೆ ಹೋಗಬಾರದು ಎಂದು ಮುನ್ನೆಚ್ಚರಿಕೆ
ನೀಡಲಾಗಿದೆ ಎಂದು ಹೇಳಿದರು.