Advertisement

ಗುಪ್ತಚರ ವೈಫಲ್ಯ ಕಾರಣ?

03:55 AM Jul 13, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಅಹಿತಕರ ಘಟನೆಗಳು ನಡೆಯಲು ಪೊಲೀಸ್‌ ಗುಪ್ತಚರ ಇಲಾಖೆಯ ವೈಫಲ್ಯ ಕಾರಣವೇ? ಹೀಗೊಂದು ಆರೋಪ ಇದೀಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಆದರೆ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಈ ಆರೋಪ ವನ್ನು ನಿರಾಕರಿಸುತ್ತಿದ್ದಾರೆ.

Advertisement

ಪ್ರತಿಯೊಂದು ಜಿಲ್ಲೆಯಲ್ಲಿಯೂ ಕಾನೂನು- ಸುವ್ಯವಸ್ಥೆ ಹದಗೆಡದಂತೆ ನೋಡಿ ಕೊಳ್ಳುವಲ್ಲಿ, ಗುಪ್ತಚರ ವಿಭಾಗವು ಬಹು ಮುಖ್ಯ ಪಾತ್ರ ವಹಿಸಬೇಕು. ಅದರಲ್ಲಿಯೂ ಕೋಮು ಸಂಘರ್ಷದಂತಹ ಅಹಿತರ ಘಟನೆಗಳು ನಡೆಯುವ ಜಿಲ್ಲೆಗಳಾಗಿದ್ದರೆ, ಮತ್ತಷ್ಟು ಎಚ್ಚರ ದಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡ ಬೇಕಾದ ಜವಾ ಬ್ದಾರಿ ಹಾಗೂ ಹೊಣೆ ಗಾರಿಕೆ ಈ ಗುಪ್ತಚರ ವಿಭಾಗದವರ ಮೇಲಿರುತ್ತದೆ. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಪೊಲೀಸ್‌ ಗುಪ್ತಚರ ವಿಭಾಗವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಇನ್ನು ಪೊಲೀಸ್‌ ಇಲಾಖೆಯ ಗುಪ್ತಚರ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿರುವ ಸಿಬಂದಿ ಸಂಖ್ಯೆ ಯನ್ನು ಪರಿಗಣನೆಗೆ ತೆಗೆದುಕೊಂಡರೆ ಸಾರ್ವಜನಿಕ ವಲಯದ ಈ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಗಲಭೆ ಪೀಡಿತ ಬಂಟ್ವಾಳ ತಾಲೂಕಿಗೆ ಓರ್ವ ಕಾನ್ಸ್‌ಟೆಬಲ್‌ ಮಾತ್ರ ಇದ್ದು, ಅವರಿಗೆ ಬಂಟ್ವಾಳದ ಜತೆಗೆ ಬೆಳ್ತಂಗಡಿ ತಾಲೂಕಿನ ಜವಾಬ್ದಾರಿಯನ್ನೂ ವಹಿಸಲಾಗಿದೆ. ಬಂಟ್ವಾಳ ತಾಲೂಕು ಅತಿಹೆಚ್ಚು ಸೂಕ್ಷ್ಮ ಪ್ರದೇಶವಾಗಿದ್ದು, ಕಳೆದ ಮೂರು ತಿಂಗಳಿಂದೀಚೆಗೆ ಈ ತಾಲೂಕಿನ ವಿವಿಧ ಭಾಗಗಳಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತಲೇ ಇವೆ. ಹೀಗಿರುವಾಗ ಕನಿಷ್ಠ ಇಬ್ಬರು ಗುಪ್ತಚರ ಕಾನ್ಸ್‌ಟೆಬಲ್‌ ಆವಶ್ಯಕತೆ ಇದೆ. ಒಂದೊಮ್ಮೆ ಹಾಗೆ ಮಾಡಿರುತ್ತಿದ್ದರೆ ಎಸ್‌ಡಿಪಿಐ ಮುಖಂಡ ಅಶ್ರಫ್‌ ಮತ್ತು ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತಿತ್ತೇನೋ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. 

“”ನಮ್ಮ ಸಂಖ್ಯೆ ಕಡಿಮೆ ಇದ್ದರೂ ನಾವು ಕರ್ತವ್ಯವನ್ನು ಮರೆತಿಲ್ಲ. ನಾವು ರಹಸ್ಯ ಮಾಹಿತಿ ಸಂಗ್ರಹಿಸಿ ಮೇಲಧಿ ಕಾರಿ ಗಳಿಗೆ ಕಳುಹಿಸಿದ್ದೇವೆ. ನಮ್ಮ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳುವ ಅಧಿಕಾರ ಇರುವುದು ಹಿರಿಯ ಅಧಿಕಾರಿಗಳಿಗೆ ಮಾತ್ರ. ಅವರು ಕ್ರಮ ಜರಗಿಸದಿದ್ದರೆ ನಮ್ಮ ಮೇಲೆ ಆರೋಪ ಹೊರಿಸುವುದು ಸರಿ ಯಲ್ಲ” ಎಂದು ಗುಪ್ತಚರ ವಿಭಾಗದ ಸಿಬಂದಿ ಹೇಳುತ್ತಾರೆ. 

“”ಬಂಟ್ವಾಳದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಯಾವುದೇ ಪೊಲೀಸ್‌ ಗುಪ್ತಚರ ವೈಫಲ್ಯ ಇಲ್ಲ. ಶರತ್‌ ಶವಯಾತ್ರೆ ಸಂದರ್ಭ 1000 ಪೊಲೀಸ ರನ್ನು ನಿಯೋಜಿಸಲಾಗಿತ್ತು. ಹಾಗಿ ದ್ದರೂ ಮೆರವಣಿಗೆಯ ಸಂದರ್ಭ ಕಲ್ಲು ತೂರಾಟ ಯಾರಿಂದ ಆರಂಭ ವಾಯಿತು ಎನ್ನುವ ಬಗ್ಗೆ ತನಿಖೆ ಯಿಂದ ಬೆಳಕಿಗೆ ಬರಬೇಕಿದೆ. ಒಂದೊಮ್ಮೆ ಪೊಲೀಸ್‌ ಕಡೆಯಿಂದ ಲೋಪ ಆಗಿದ್ದರೆ ಅದರ ಬಗ್ಗೆ ತನಿಖೆ ನಡೆಸ ಲಾಗುವುದು” ಎಂದು ಎಡಿಜಿಪಿ ಆಲೋಕ್‌ ಮೋಹನ್‌ ತಿಳಿಸಿದ್ದಾರೆ.

Advertisement

ಎಸ್‌ಪಿ ಹುದ್ದೆಯೇ ಖಾಲಿ
ಜಿಲ್ಲೆಯ ಪೊಲೀಸ್‌ ಗುಪ್ತಚರ ವಿಭಾಗದಲ್ಲಿ ಮೇಲಿನ ಹಂತದ ಅಧಿಕಾರಿ ಗಳಿಂದ ಹಿಡಿದು ತಳ ಮಟ್ಟದ ಕಾನ್ಸ್‌ಟೆಬಲ್‌ವರೆಗೆ ಒಟ್ಟು ಸುಮಾರು 19 ಮಂಜೂರಾತಿ ಹುದ್ದೆಗಳಿವೆ. ಎಸ್‌ಪಿ-1, ಡಿವೈಎಸ್‌ಪಿ- 1, ಪೊಲೀಸ್‌ ಇನ್ಸ್‌ಪೆಕ್ಟರ್‌- 1, ಸಬ್‌ ಇನ್ಸ್‌ಪೆಕ್ಟರ್‌ 4, ಹೆಡ್‌ ಕಾನ್ಸ್‌ಟೆಬಲ್‌ 4 ಹಾಗೂ ಕಾನ್ಸ್‌ಟೆಬಲ್‌ 8 ಹುದ್ದೆಗಳಿವೆ. ಆದರೆ, ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಸೇರಿದಂತೆ ಒಟ್ಟು ಇರುವ ಸಿಬಂದಿ ಸಂಖ್ಯೆ ಕೇವಲ 10 ಮಾತ್ರ. ಗಮನಾರ್ಹ ಅಂಶವೆಂದರೆ, ಅತ್ಯಂತ ಪ್ರಮುಖವಾದ ಎಸ್‌ಪಿ ಹುದ್ದೆಯೇ ಖಾಲಿಯಿದ್ದು, ಶಿವಮೊಗ್ಗ ಜಿಲ್ಲಾ ಗುಪ್ತಚರ ವಿಭಾಗದ ಎಸ್‌ಪಿ ಇಲ್ಲಿನ ಪ್ರಭಾರ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಡಿ.ವೈ.ಎಸ್‌.ಪಿ. ಹುದ್ದೆ ಕೂಡ ಖಾಲಿ ಇದೆ. ಪೊಲೀಸ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಲ್ಲಿ ನಿಗದಿಯಷ್ಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪಿಎಸ್‌ಐ ಹುದ್ದೆ 4ರಲ್ಲಿ ಒಬ್ಬರು ಮಾತ್ರ ಇದ್ದು, ಮೂರು ಸ್ಥಾನ ಖಾಲಿಯಿವೆ. ಹೆಡ್‌ಕಾನ್ಸ್‌ಟೆಬಲ್‌ ಹುದ್ದೆಯ ಎಲ್ಲಾ 4 ಸ್ಥಾನಗಳೂ ಭರ್ತಿ ಇವೆ. ಈ ನಡುವೆ ತಳ ಹಂತದಲ್ಲಿ ನಿಜವಾಗಿಯೂ ಫೀಲ್ಡ್‌ ವರ್ಕ್‌ ಮಾಡಬೇಕಾದ ಎಂಟು ಕಾನ್ಸ್‌ಟೆಬಲ್‌ ಹುದ್ದೆಗಳ ಪೈಕಿ ಮೂರು ಮಾತ್ರ ಭರ್ತಿಯಾಗಿದ್ದು, 5 ಹುದ್ದೆಗಳು ಹಾಗೆಯೇ ಖಾಲಿ ಬಿದ್ದಿವೆ. 

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next