ಶಿವಮೊಗ್ಗ: ರಾಜ್ಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕೊಟ್ಟಿರುವ ಅವಿಭಜಿತ ಶಿವಮೊಗ್ಗ ಜಿಲ್ಲೆ ಇದುವರೆಗೆ ಮೂರು ಬಾರಿ ಉಪ ಚುನಾವಣೆ ಎದುರಿಸಿದೆ. ಮೂರೂ ಚುನಾವಣೆಗಳು ಮಾಜಿ ಮುಖ್ಯಮಂತ್ರಿಗಳ ಸ್ವ ಹಿತಾಸಕ್ತಿಯಿಂದಲೇ ಸೃಷ್ಟಿಯಾದವು. ಈಗ ನಡೆಯುತ್ತಿರುವುದು ನಾಲ್ಕನೇ ಉಪ ಚುನಾವಣೆ.
ಜಿಲ್ಲೆ ಎದುರಿಸಿದ ಉಪ ಚುನಾವಣೆಗಳು ಇಬ್ಬರು ಮಾಜಿ ಮುಖ್ಯಮಂತ್ರಿಗಳ ರಾಜಕೀಯ ಹಿತಾಸಕ್ತಿಯಿಂದ ನಡೆದಂತಹವು. ಮೊದಲಿನ 2 ಚುನಾವಣೆಗಳು ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ರಾಜಕೀಯ ಹಿತಾಸಕ್ತಿಯಾದರೆ, ಆನಂತರದ 2 ಉಪ ಚುನಾವಣೆಗಳು ಮತ್ತೂಬ್ಬ ಮಾಜಿ ಸಿಎಂ ಯಡಿಯೂರಪ್ಪ ಅವರ ಹಿತಾಸಕ್ತಿಯದ್ದಾಗಿದೆ.
1994ರಲ್ಲಿ ಕಾಂಗ್ರೆಸ್‌ನಿಂದ ಹೊರ ಬಂದು ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಕಟ್ಟಿ ಸೊರಬದಿಂದ ಮರು ಆಯ್ಕೆಯಾದ ಬಂಗಾರಪ್ಪ 1996ರ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಕಣಕ್ಕಿಳಿದರು. ಮೊದಲ ಯತ್ನದಲ್ಲೇ ಸುಮಾರು 70 ಸಾವಿರ ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿ ಸೊರಬಕ್ಕೆ ಉಪ ಚುನಾವಣೆ ನಡೆಯುವಂತೆ ಮಾಡಿದರು. ಬೆಳ್ಳಿತೆರೆಗೆ ಆಗಷ್ಟೇ ಪ್ರವೇಶಿದ್ದ ಹಿರಿಯ ಪುತ್ರ ವಸಂತಕುಮಾರ್(ಕುಮಾರ ಬಂಗಾರಪ್ಪ) ಅವರನ್ನು ರಾಜಕೀಯಕ್ಕೆ ಕರೆ ತಂದು ಸೊರಬದಲ್ಲಿ ಗೆಲ್ಲಿಸಿದರು.
ಅನಂತರದಲ್ಲಿ ಮತ್ತೆ 2 ಬಾರಿ ಕಾಂಗ್ರೆಸ್‌ಗೆ ಹೋಗಿ ಬಂದು 2004ರಲ್ಲಿ ಬಿಜೆಪಿ ಸೇರಿ ಸಂಸತ್‌ಗೆ ಆಯ್ಕೆಯಾಗಿದ್ದರು. ವರ್ಷದಲ್ಲಿ ಮತ್ತೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷ ಸೇರಿದ್ದರು. ಅವರ ರಾಜೀನಾಮೆಯಿಂದ 2005ನೇ ಮೇ/ಜೂನ್‌ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮೊದಲ ಬಾರಿಗೆ ಉಪ ಚುನಾವಣೆ ಕಾಣಬೇಕಾಯಿತು.
ಯಡಿಯೂರಪ್ಪ ಅವರು 2013ರಲ್ಲಿ ಕೆಜೆಪಿಯಿಂದ ಶಿಕಾರಿಪುರದಲ್ಲಿ ಶಾಸಕರಾಗಿ ಆಯ್ಕೆಯಾದ ಕೆಲವೇ ತಿಂಗಳಲ್ಲಿ ಬಿಜೆಪಿ ಸೇರ್ಪಡೆಯಾಗಿ 2014ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಚುನಾಯಿತರಾದರು. ಆಗ ಶಿಕಾರಿಪುರದಲ್ಲಿ ತೆರವಾದ ಶಾಸಕ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದರು. 2018 ಏಪ್ರಿಲ್/ಮೇನಲ್ಲಿ ಬಂದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಶಿಕಾರಿಪುರದಿಂದ ಪುನರಾಯ್ಕೆಯಾದ ಅವರು ಲೋಕಸಭೆಗೆ ರಾಜೀನಾಮೆ ಸಲ್ಲಿಸಿದ್ದರಿಂದ ಈಗ ಬಲವಂತದ ಉಪ ಚುನಾವಣೆ ಬಂದೊದಗಿದೆ.
ಬಿಜೆಪಿ ಆತ್ಮವಿಶ್ವಾಸ, ಮೈತ್ರಿಕೂಟದಲ್ಲಿ ಗೊಂದಲ
ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಪರ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಆದರೆ ಮೈತ್ರಿಕೂಟದಲ್ಲಿ ಯಾರಿಗೆ ಟಿಕೆಟ್ ಕೊಡಬೇಕೆಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಮಂಗಳವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ ನಮಗೆ ಬಿಟ್ಟು ಕೊಡಿ ಎಂದು ಕೇಳಿಕೊಂಡಿದೆ. ಇದಕ್ಕೆ ಬಹುತೇಕ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದ್ದರೂ ಬುಧವಾರ ವಿಜಯಪುರದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ನೀಡಿದ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ದೂಡಿದೆ. ಅ.13ರಂದು ರಾಹುಲ್ ಗಾಂಧಿ ಬೆಂಗಳೂರಿಗೆ ಬರುತ್ತಿದ್ದು, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
– ಶರತ್ ಭದ್ರಾವತಿ