Advertisement

ವಿಕೋಪಗಳಿಗೆ ಪರಿಸರ ನಾಶ ಕಾರಣ

01:02 PM Jun 12, 2019 | Suhan S |

ಮಂಡ್ಯ: ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡುವುದು ಅಮಾನವೀಯ. ಹುಟ್ಟಿನಿಂದ ಸಾಯುವವರೆಗೂ ನಮ್ಮನ್ನು ಜೀವಂತ ವಾಗಿಡುವುದೇ ಪ್ರಕೃತಿ. ಅದರ ಜೀವಂತಿಕೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿ ವತಿಯಿಂದ ತಾಲೂಕಿನ ಕೀಲಾರ ಗ್ರಾಮದಲ್ಲಿ ನಡೆದ ಸ್ವಚ್ಛಮೇವ ಜಯತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಜಾಗತಿಕ ತಾಪಮಾನ ತೀವ್ರಗೊಳ್ಳುತ್ತಿದ್ದು, ಬರಗಾಲ, ಚಂಡಮಾರುತ, ಸುನಾಮಿಯಂತಹ ಪ್ರಕೃತಿ ವಿಕೋಪಗಳನ್ನು ನಾವು ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಪರಿಸರ ಅಸಮತೋಲನವೇ ಕಾರಣ. ಈ ನಿಟ್ಟಿನಲ್ಲಿ ನಾವು ಪರಿಸರವನ್ನು ನಾವು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪರಿಸರದ ಮಹತ್ವ ಕುರಿತು ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು. ಒಂದು ಮಗು ಒಂದು ಗಿಡ ನೆಟ್ಟು ಬೆಳೆಸಿದರೆ ಪರಿಸರ ಸಮತೋಲನ ಸಾಧ್ಯವಾಗುತ್ತದೆ. ನಾವೂ ಸಹ ಪ್ರಕೃತಿ ಸಂರಕ್ಷಕರಾಗಿ ನಿಸರ್ಗದ ಮಡಿಲಿನಲ್ಲಿ ಜೀವಿಸುವಂತಹ ವಾತಾವರಣವನ್ನು ಸೃಷ್ಟಿಸಿಕೊಂಡಾಗ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಲು ಸಾಧ್ಯವಿದೆ ಎಂದು ಹೇಳಿದರು.

ಸ್ವಚ್ಛತೆ, ಪರಿಸರಕ್ಕೆ ಸಂಬಂಧಿಸಿದಂತೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾವು, ರಸ್ತೆ, ಚರಂಡಿ ಸ್ವಚ್ಛತೆ ಬಗ್ಗೆ ಮಾತನಾಡುತ್ತೇವೆ. ಆದರೆ ಪರಿಸರ ಮತ್ತು ನೀರಿನ ಬಗ್ಗೆ ಮಾತನಾಡುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಂದು ಬಿಂದಿಗೆ ನೀರಿಗಾಗಿ ಕಿಲೋಮೀಟರ್‌ ದೂರ ಹೋಗಬೇಕಿದೆ. ಮುಂದಿನ ದಿನಗಳಲ್ಲಿ ಇದೇ ಸ್ಥಿತಿ ಎಲ್ಲೆಡೆ ಬರಬಹುದು. ಅದಕ್ಕೂ ಮೊದಲು ನಾವು ಎಚ್ಚೆತ್ತು ಪರಿಸರ ಉಳಿಸಲು ಪಣ ತೊಡಬೇಕು ಎಂದು ಸುಮಲತಾ ತಿಳಿಸಿದರು.

ಹಣ ಮಾಡಿದರೆ ಏನು ಪ್ರಯೋಜನ: ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಾವು ಈಗಲೇ ಜಾಗೃತರಾಗಿ ಪರಿಸರ ಉಳಿವಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಬೇಕಿದೆ. ಎಲ್ಲೆಡೆ ಸಮೃದ್ಧವಾಗಿ ಗಿಡ-ಮರಗಳು ಬೆಳೆದರೆ ಕಾಡು ಹೆಚ್ಚಾಗಿ ಸಕಾಲದಲ್ಲಿ ಮಳೆ ಬೀಳುತ್ತದೆ. ಭೂಮಿ ತಂಪಾಗುವುದರ ಜತೆಗೆ ಜಾಗತಿಕ ತಾಪಮಾನವೂ ಕ್ಷೀಣಿಸುತ್ತದೆ. ಪ್ರಾಕೃತಿಕ ಸಮತೋಲನ ಕಾಪಾಡಿದಾಗ ಜೀವಸಂಕುಲದ ಉಳಿವು ಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲರಲ್ಲೂ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ನಾವು ಜೀವಂತವಾಗಿರಲು ಪ್ರಕೃತಿಯನ್ನೇ ಉಳಿಸದೆ, ಕೋಟಿಗಟ್ಟಲೆ ಆಸ್ತಿ, ಹಣ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

Advertisement

ಪ್ರವಾಸಿ ತಾಣಗಳ ಸುತ್ತಮುತ್ತ ಪರಿಸರ ಹಾನಿ ಹೆಚ್ಚಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಸರ ಹಾಳು ಮಾಡಲಾಗುತ್ತಿದೆ. ಇನ್ನಾದರೂ ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಒಂದು ಮರ ಕಡಿದು ಅಭಿವೃದ್ಧಿಪಡಿಸಿದರೆ ನಾಲ್ಕು ಮರ ನೆಟ್ಟು ಪರಿಸರವನ್ನು ಕಾಪಾಡುವ ಕೆಲಸ ಆಗಬೇಕು. ಆಗ ಮಾತ್ರ ಪರಿಸರಕ್ಕೆ ನಾವು ನಿಜವಾಗಲೂ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.

ಯುವ ಶಕ್ತಿಯ ಮುಂದೆ ಯಾವ ಶಕ್ತಿಯೂ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಸರದ ಬಗ್ಗೆ ಯುವ ಶಕ್ತಿ ಕಾಳಜಿ ವಹಿಸಬೇಕಿದೆ. ಪ್ರತಿ ವಿಚಾರದಲ್ಲೂ ತಮ್ಮ ಕರ್ತವ್ಯ ಏನೆಂಬುದನ್ನು ಅರಿತು ಕೆಲಸ ಮಾಡಬೇಕು. ಪರಿಸರವನ್ನು ಉಳಿಸಿ ಬೆಳೆಸುವುದು ಯುವಶಕ್ತಿಯ ಮುಂದಿರುವ ಸವಾಲಾಗಿದೆ ಎಂದು ಹೇಳಿದರು. ಶಾಸಕ ಎಂ.ಶ್ರೀನಿವಾಸ್‌ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಸರಳ ಕಾರ್ಯಕ್ರಮ: ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್‌ ಕಾರ್ನಾಡ್‌ ನಿಧನದ ಹಿನ್ನಲೆಯಲ್ಲಿ ಸ್ವಚ್ಚಮೇವ ಜಯತೆ ಕಾರ್ಯಕ್ರಮ ಸರಳವಾಗಿ ನಡೆಯಿತು. ಸಂಸದೆ ಸುಮಲತಾ ಅವರು ಶಾಲೆ ಆವರಣದಲ್ಲಿ ಗಿಡ ನೆಟ್ಟು ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗಿರೀಶ್‌ ಕಾರ್ನಾಡ್‌ ಭಾವಚಿತ್ರಕ್ಕೆ ಪುಷ್ಪನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಸದೆ ಸುಮಲತಾಗೆ ರೈತಸಂಘದಿಂದ ಮನವಿ:

ಮೈಶುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳನ್ನು ತಕ್ಷಣವೇ ಆರಂಭಿಸುವುದು, ಕಬ್ಬಿಗೆ ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ರೈತಸಂಘದ ಕಾರ್ಯಕರ್ತರು ಮಂಗಳವಾರ ಸಂಸದೆ ಸುಮಲತಾ ಅವರಿಗೆ ಮನವಿ ಸಲ್ಲಿಸಿದರು. ಕೆಆರ್‌ಎಸ್‌ ಮತ್ತು ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಬಿಡುಗಡೆ ಮಾಡುವುದು. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವುದು. ಭತ್ತ ಖರೀದಿ ಕೇಂದ್ರವನ್ನು ಶೀಘ್ರ ತೆರೆಯಬೇಕು. ರಾಜ್ಯಸರ್ಕಾರದ ಸಾಲ ಮನ್ನಾ ಪರಿಹಾರ ಇದುವರೆಗೂ ರೈತರಿಗೆ ತಲುಪಿಲ್ಲ. ಅದರ ಪ್ರಯೋಜನ ರೈತರಿಗೆ ಸಿಗುವಂತೆ ಮಾಡಬೇಕು ಎಂದು ಕೋರಿದರು. ಕಂದಾಯ ಇಲಾಖೆಯಲ್ಲಿ ರೈತರ ಯಾವುದೇ ಕೆಲಸಗಳೂ ನಡೆಯುತ್ತಿಲ್ಲ. ವಿನಾಕಾರಣ ರೈತರನ್ನು ಕಚೇರಿಗೆ ಅಲೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಅಂತೆಯೇ ಕೆಆರ್‌ಎಸ್‌ ಸುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಿ ಅಣೆಕಟ್ಟು ಉಳಿಸುವಂತೆ ಮನವಿ ಮಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next