ಬೆಂಗಳೂರು: ದೀಪಾವಳಿ ಹಬ್ಬ ಹಾಗೂ ವಾರಾಂತ್ಯದ ಭಾಗವಾಗಿ ಮುಂಬರುವ ಗುರುವಾರ ನರಕ ಚತುರ್ದಶಿ, ಶುಕ್ರವಾರ ಕರ್ನಾಟಕ ರಾಜ್ಯೋತ್ಸವ, ಶನಿವಾರ ಬಲಿಪಾಡ್ಯಮಿ ಹಾಗೂ ರವಿವಾರ ವಾರಾಂತ್ಯದ ಸರಕಾರಿ ರಜೆ. ಹೀಗೆ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ-ತಮ್ಮ ಊರುಗಳಿಗೆ ಅಥವಾ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಬಸ್‌ಗಳ ಟಿಕೆಟ್ ದರವು ಸಾಮಾನ್ಯ ದಿನಗಳಿಗಿಂತ ದುಪ್ಪಟ್ಟು ಹೆಚ್ಚಳವಾಗಿದೆ.
ಕೆಲ ಖಾಸಗಿ ಬಸ್‌ಗಳು ಬುಧವಾರದಂದೇ ಪ್ರಯಾಣ ದರವನ್ನು ದುಪ್ಪಟ್ಟುಗೊಳಿಸಿದರೆ, ಇನ್ನೂ ಕೆಲವು ಗುರುವಾರದಂದು ಎರಡೂವರೆ-ಮೂರು ಪಟ್ಟು ದರವನ್ನು ಹೆಚ್ಚಿಸಿರುವು ದು ಆನ್‌ಲೈನ್ ಬುಕ್ಕಿಂಗ್‌ನ ವೆಬ್‌ಸೈಟ್‌ಗಳಲ್ಲಿ ಕಂಡುಬರುತ್ತಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್‌ಗಳಲ್ಲಿ 600ರಿಂದ 1,100 ರೂ. ವರೆಗೆ ಇದ್ದರೆ, ಈಗ 1,800ರೂ.ನಿಂದ 2,800 ರೂ.ವರೆಗೆ ಹೆಚ್ಚಳವಾಗಿದೆ. ಅದೇ ರೀತಿ ಮಂಗಳೂರಿಗೆ 700ರಿಂದ 950 ರೂ.ವರೆಗೆ ಇದ್ದ ದರ 1,600ರಿಂದ 2,000 ರೂ.ವರೆಗೆ ಏರಿಕೆಯಾಗಿದೆ. ಬಳ್ಳಾರಿಗೆ 600ರಿಂದ 800 ರೂ. ಇರುವ ದರವನ್ನು 1,300ರಿಂದ 1,800 ರೂ. ವರೆಗೆ, ಶಿರಸಿಗೆ ಮೊದಲು 700ರಿಂದ 900 ರೂ. ಇದ್ದರೆ, ಈಗ 1,800ರಿಂದ 3,000 ರೂ.ಗಳ ವರೆಗೂ ಏರಿಕೆಯಾಗಿದೆ. ಮಡಿಕೇರಿಗೆ ಸಾಮಾನ್ಯ ದಿನಗಳಲ್ಲಿ 500 ರೂ.ನಿಂದ 600 ರೂ. ಇದ್ದರೆ, ಈಗ 1,200 ರೂ.ನಿಂದ 1,400ರೂ. ಆಗಿದೆ. ಬಸವಕಲ್ಯಾಣಕ್ಕೆ 1,100 ರೂ.ನಿಂದ 2,000ರೂ. ವರೆಗೆ ಹೆಚ್ಚಿಸಲಾಗಿದೆ. ಹೀಗೆ ರಾಜಧಾನಿ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ತೆರಳುವವರಿಗೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಕೆಯ ಬರೆ ಎಳೆಯುತ್ತಿದ್ದಾರೆ.
ಪರ್ಮಿಟ್ ರದ್ದು ಎಚ್ಚರಿಕೆ
ಪ್ರಯಾಣಿಕರ ಒತ್ತಾಯದ ಮೇರೆಗೆ, ಸರಣಿ ರಜೆ ಅಂಗವಾಗಿ ಖಾಸಗಿ ಬಸ್‌ಗಳು ಪ್ರಯಾಣದ ದರವನ್ನು ಹೆಚ್ಚಿಸಿ, ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಿದರೆ ಆ ಬಸ್‌ನ ಪರ್ಮಿಟ್ ಹಾಗೂ ನೋಂದಣಿ ಪತ್ರವನ್ನು (ಆರ್‌ಸಿ) ರದ್ದುಗೊಳಿಸಲಾಗುತ್ತದೆ ಎಂದು ಸಾರಿಗೆ ಇಲಾಖೆಯು ಖಾಸಗಿ ಬಸ್ ಮಾಲಕರಿಗೆ ಎಚ್ಚರಿಕೆ ನೀಡಿದೆ. ಆದರೂ ಖಾಸಗಿ ಬಸ್ ಮಾಲಕರು ಇಲಾಖೆ ನೀಡಿರುವ ಸೂಚನೆಯನ್ನು ಅವಗಣಿಸಿ ಹಬ್ಬದ ಆಸು-ಪಾಸು ದಿನಗಳಲ್ಲಿನ ಟಿಕೆಟ್ ದರವನ್ನು ದುಪ್ಪಟ್ಟು, 3 ಪಟ್ಟು ಹೆಚ್ಚಳ ಮಾಡಿರುವುದು ಕಂಡು ಬರುತ್ತಿದೆ.
ಸಾಮಾನ್ಯ ದಿನಗಳಿಂದ ವಿಶೇಷ ಹಬ್ಬ, ಸಾಲು ರಜೆಗಳಿರುವ ಸಂದರ್ಭದಲ್ಲಿ ಶೆ. 50ರಿಂದ 60ರಷ್ಟು ಹೆಚ್ಚಳ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರದಿಂದಲೇ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತಿದೆ.
-ಹೆಸರು ಹೇಳಲು ಇಚ್ಛಿಸದ ಖಾಸಗಿ ಬಸ್‌ನ ಏಜೆಂಟ್
ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು 4 ಜನಕ್ಕೆ 2,500ರಿಂದ 3,000ರೂ.ಗಳು ಸಾಕಿತ್ತು. ಆದರೆ ಈಗ ಒಬ್ಬರಿಗೆ 2,000 ರೂ.ನಂತೆ 4 ಜನಕ್ಕೆ ಒಟ್ಟು 8,000 ರೂ.ಗಳು ಬೇಕಾಗಿದೆ. ಅದೇ ರೀತಿ ವಾಪಸಾಗಲು 8,000 ರೂ.ನಂತೆ ಒಟ್ಟು 16,000 ರೂ.ಗಳು ಎತ್ತಿಡಬೇಕಾಗಿದೆ. ಹೀಗೆ ಆದರೆ ಸಾಮಾನ್ಯ ವರ್ಗದ ಕುಟುಂಬಗಳ ಗತಿ ಏನು?
– ಪವನ್, ಪ್ರಯಾಣಿಕ