Advertisement

ದುಡಿಯೋಣ ಬಾ ಎಂದರೂ ಬರುತ್ತಿಲ್ಲ

10:30 AM Apr 20, 2022 | Team Udayavani |

ಹುಬ್ಬಳ್ಳಿ: ನರೇಗಾದಡಿ ಆರಂಭಿಸಿರುವ ದುಡಿಯೋಣ ಬಾ ಅಭಿಯಾನದಲ್ಲಿ ವೇತನ ಹೆಚ್ಚಳ ಮಾಡಿದರೂ ದುಡಿಯಲು ಜನರು ನಿರೀಕ್ಷಿತ ರೀತಿಯಲ್ಲಿ ಆಗಮಿಸದೆ ಯೋಜನೆಗೆ ಹಿನ್ನಡೆ ಆಗುತ್ತಿದೆ. ತಾಲೂಕಿನಲ್ಲಿ ಒಟ್ಟು 24,844 ಜಾಬ್‌ ಕಾರ್ಡ್‌ ಮಾಡಿಸಿಕೊಂಡಿದ್ದು, ಕೆಲಸಕ್ಕೆ ಮಾತ್ರ 500ರಿಂದ 1500 ಮಂದಿ ಬರುತ್ತಿದ್ದಾರೆ.

Advertisement

ಉದ್ಯೋಗ ಖಾತ್ರಿ(ನರೇಗಾ)ಯಲ್ಲಿ ಈ ಹಿಂದೆ ಇದ್ದ 289 ರೂ. ವೇತನವನ್ನು 309 ಪ್ಲಸ್‌ 10 ರೂ. ಸೇರಿ ಒಟ್ಟು 319 ರೂ.ಗೆ ಹೆಚ್ಚಳ ಮಾಡಲಾಗಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಜನಸ್ಪಂದನೆ ದೊರೆಯುತ್ತಿಲ್ಲ. ಮಾ. 15ರಿಂದ ಜೂ. 15ರ ವರೆಗೆ ದುಡಿಯೋಣ ಬಾ ಅಭಿಯಾನ ಜಾರಿಯಲ್ಲಿದೆ.

ಈ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿ, ಕೆರೆ ದುರಸ್ತಿ ಕಾರ್ಯ, ಕಾಲುವೆ ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಬಹುದಾಗಿದೆ. ಸಾರ್ವಜನಿಕ ಹಾಗೂ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆಯಲು ಇನ್ನಾದರೂ ಮುಂದಾಗಬೇಕಿದೆ.

ರಿಯಾಯಿತಿ-ಆಯಾ ವ್ಯವಸ್ಥೆ: ನರೇಗಾ ಯೋಜನೆಯಡಿ ಕಾಮಗಾರಿ ಮಾಡುವ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಶೇ.50 ರಿಯಾಯಿತಿ ಇದ್ದು ಅವರು ಸಹ ಅದರ ಸದುಪಯೋಗ ಪಡಿಸಿಕೊಳ್ಳಬಹುದು. ನರೇಗಾ ಯೋಜನೆಯಡಿ ಮಹಿಳೆಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು, ಅವರು ಕೂಡಾ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆನ್ನುವ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಕೂಲಿಗೆ ಆಗಮಿಸುವ ಮಹಿಳೆಯರೊಂದಿಗೆ ಮಕ್ಕಳಿದ್ದರೆ ಮಕ್ಕಳನ್ನು ನೋಡಿಕೊಳ್ಳಲು ಆಯಾ ನೇಮಕ ಮಾಡುವ ಮೂಲಕ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಕಾರ್ಯ ನಡೆಯಲಿದೆ. ಮಕ್ಕಳಿಗಾಗಿ ವಿಶೇಷ ನೆರಳು, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆ ಕೂಲಿ ಮಾಡುವ ಸ್ಥಳದಲ್ಲಿಯೇ ಆಗಲಿದೆ.

ಈ ಹಿಂದೆ ಮಹಿಳಾ ಕಾಯಕೋತ್ಸವ ಯೋಜನೆ ಮಾಡುವ ಮೂಲಕ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರು ದುಡಿಯುವಂತಾಗಲಿ ಎನ್ನುವುದನ್ನು ಮಾಡಲಾಗಿದ್ದು, ಅದರಲ್ಲಿ ತಾಲೂಕಿನಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿತ್ತು.

Advertisement

ಗ್ರಾಪಂ ಸಂಪರ್ಕಿಸಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಜನರನ್ನು ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಉದ್ಯೋಗ ಬೇಕಾದಲ್ಲಿ ಗ್ರಾಮ ಪಂಚಾಯತಿಗೆ ಸಂಪರ್ಕಿಸಿ ಅಲ್ಲಿ ಅರ್ಜಿ ತುಂಬಿದಲ್ಲಿ ಅದನ್ನು ಪುರಸ್ಕರಿಸಿ ಉದ್ಯೋಗ ನೀಡಲಾಗುವುದು. ಈಗಾಗಲೇ ಎಲ್ಲೆಡೆ ಪ್ರಚಾರ ಕಾರ್ಯ ಮಾಡಲಾಗಿದ್ದು, ತಾಲೂಕಿನಾದ್ಯಂತ ರಥಯಾತ್ರೆ ಮಾಡುವ ಮೂಲಕ ಎಲ್ಲೆಡೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಪ್ರಚಾರ ನಡೆಸಲಾಗಿದೆ.

ಪ್ರಯಾಣ ಭತ್ಯೆ: ಉದ್ಯೋಗ ಅರಸಿ ಬರುವ ಮಹಿಳೆಯರಿಗೆ ಹಾಗೂ ಪುರುಷರಿಗೆ ಕಾಮಗಾರಿ ಗ್ರಾಮದಿಂದ ಐದು ಕಿಮೀಗಿಂತ ದೂರ ಇದ್ದಲ್ಲಿ ಪ್ರಯಾಣ ಭತ್ಯೆ ಸಹ ನೀಡಲಾಗುತ್ತದೆ. ಕಾಮಗಾರಿಯಲ್ಲಿ ಪಾಲ್ಗೊಳುವವರಿಗೆ ಇ-ಶ್ರಮ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತಿದೆ. ಇದರಿಂದ ಅವರಿಗೆ ವೈದ್ಯಕೀಯ ವ್ಯವಸ್ಥೆಗೆ ಅನುಕೂಲವಾಗಲಿದೆ. ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಜಾರಿಯಲ್ಲಿರುವ ಕಾಮಗಾರಿಗಳಲ್ಲಿ ಜನರು ತಮ್ಮನ್ನು ತಾವು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕಿದೆ.

ಜನರಿಗೆ ಅಂದು ದುಡಿಮೆ ಮಾಡಿರುವ ವೇತನ ಅಂದೇ ಬೇಕು. ಆದರೆ ನಮ್ಮಕಡೆ ಕೆಲಸ ನಿರ್ವಹಿಸಿದ ಒಂದು ವಾರದಲ್ಲಿ ವೇತನ ಅವರ ಖಾತೆಗೆ ಜಮೆಯಾಗುತ್ತದೆ. ಹುಬ್ಬಳ್ಳಿ ಸಮೀಪ ಇರುವುದರಿಂದ ಹೆಚ್ಚಿನ ಜನರು ಉದ್ಯೋಗ ಅರಸಿ ಹುಬ್ಬಳ್ಳಿಗೆ ಬರುತ್ತಾರೆ. ಅಂತಹವರನ್ನು ನಾವುಗಳು ತಿಳಿ ಹೇಳಿ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಇನ್ನು ಕಳೆದ ಬಾರಿ ನಡೆಸಿದ ಕಾಯಕೋತ್ಸವದಿಂದ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. -ಗಂಗಾಧರ ಕಂದಕೂರ, ತಾಪಂ ಇಒ

ಈಗಾಗಲೇ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಮಗಾರಿ ನಡೆದಿದೆ. ಪ್ರತಿದಿನ 500ರಿಂದ 1500 ಜನರು ಕಾಮಗಾರಿ ಮಾಡುತ್ತಿದ್ದು, ಎಷ್ಟೇ ಜನ ಬಂದರೂ ಅವರಿಗೆ ಉದ್ಯೋಗ ನೀಡುವ ಮೂಲಕ ಯೋಜನೆಯಡಿ ಅವರನ್ನು ತೊಡಗಿಸಿಕೊಳ್ಳಲು ಸಿದ್ಧರಿದ್ದೇವೆ.  ಸದಾನಂದ ಅಮರಾಪುರ, ಸಹಾಯಕ ನಿರ್ದೇಶಕ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ    

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next