Advertisement

“ದುಡಿಯೋಣ ಬಾ’ನಿಮ್ಮೂರಲ್ಲೇ ಕೆಲಸ

05:23 PM Apr 01, 2022 | Team Udayavani |

ಕಾರವಾರ: ಬೇಸಿಗೆಯಲ್ಲಿ ಉದ್ಯೋಗವಿಲ್ಲದೆ ಪರಿತಪಿಸುವ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಉದ್ಯೋಗ ನೀಡುವ ಸಲುವಾಗಿ ಹಾಗೂ ಮುಂಗಾರಿನ ವೆಚ್ಚದ ನಿರ್ವಹಣೆಗೆ ಸಹಾಯಕ ಆಗುವಂತೆ ಜಿಲ್ಲೆಯಲ್ಲಿ ದುಡಿಯೋಣ ಬಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಪ್ರಿಯಾಂಕಾ ತಿಳಿಸಿದ್ದಾರೆ.

Advertisement

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಾ.15 ರಿಂದ ಜೂ.30 ರವರೆಗೆ ದುಡಿಯೋಣ ಬಾ ಅಭಿಯಾನದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಜನರಿಗೆ ಈ ಅವದಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ಆರ್ಥಿಕ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು, ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಒಂದು ಕುಟುಂಬವು ವರ್ಷದಲ್ಲಿ 100 ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಬೇಸಿಗೆಯ ಅವಧಿಯಲ್ಲಿ 60 ದಿನಗಳು ಕೆಲಸ ಮಾಡಿದ್ದಲ್ಲಿ 309ರೂ. ಕೂಲಿಯಂತೆ 18540 ರೂ.ಗಳಿಸಬಹುದು. ಇದರಿಂದ ಮುಂಬರುವ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಭಿತ್ತನೆ ಬೀಜ, ರಸಗೊಬ್ಬರ ಖರೀದಿ, ಮಕ್ಕಳ ಶಾಲೆ, ಕಾಲೇಜು ಶುಲ್ಕ ಸೇರಿದಂತೆ ಅನೇಕ ಖರ್ಚನ್ನು ಭರಿಸಲು ಅನುಕೂಲವಾಗುತ್ತದೆ ಎಂಬ ಅಂಶದ ಬಗ್ಗೆ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಉದ್ಯೋಗ ಚೀಟಿ ಹೊಂದಿಲ್ಲದ ಕುಟುಂಬಗಳಿಗೆ ಗ್ರಾಪಂಗಳಲ್ಲಿ ನಮೂನೆ-1ರಲ್ಲಿ ಅರ್ಜಿ ಹಾಗೂ ಅಗತ್ಯ ದಾಖಲೆ ಪಡೆದುಕೊಂಡು ಉದ್ಯೋಗ ಚೀಟಿ ವಿತರಿಸಲಾಗುತ್ತಿದೆ. ಸಾಮೂದಾಯಿಕ ಕಾಮಗಾರಿಯಲ್ಲಿ ಭಾಗವಹಿಸುವುದರೊಂದಿಗೆ ವೈಯಕ್ತಿಕವಾಗಿ ಒಂದು ಅರ್ಹ ಕುಟುಂಬವು 2.5 ಲಕ್ಷದ ವರೆಗೆ ಕಾಮಗಾರಿ ಕೈಗೊಳ್ಳಲು ಅವಕಾಶವಿರುತ್ತದೆ. ಕಾಮಗಾರಿ ಪಡೆಯಲು ಹತ್ತಿರದ ಗ್ರಾಪಂಗೆ ಭೇಟಿ ನೀಡಿ ಬೇಡಿಕೆ ಸಲ್ಲಿಸಬಹುದು. ಇನ್ನಿತರ ಯಾವುದೇ ಮಾಹಿತಿ ಅವಶ್ಯವಿದ್ದಲ್ಲಿ ನರೇಗಾ ಸಹಾಯವಾಣಿ ಸಂ: 876 289 1000 ಗೆ ಕರೆ ಮಾಡಬಹುದು ಎಂದು ಸಿಇಒ ಮಾಧ್ಯಮಗಳಿಗೆ ಹೇಳಿದರು.

ಪ್ರಗತಿ ವಿವರ: ಜಿಲ್ಲೆಯಲ್ಲಿ 2020-21 ಆರ್ಥಿಕ ವರ್ಷ 1702841 ಮಾನವ ದಿನಗಳನ್ನು ಸೃಜಿಸಲಾಗಿದ್ದು, 2021-22 ನೇ ಸಾಲಿನಲ್ಲಿ 17 ಲಕ್ಷ ಮಾನವ ದಿನಗಳ ಗುರಿಗೆ 1919026 ಮಾನವ ದಿನಗಳನ್ನು ಸೃಜಿಸಿ ನಿಗದಿತ ಗುರಿ ಮೀರಿ 219026 ದಿನಗಳ ಹೆಚ್ಚಿನ ಉದ್ಯೋಗ ಒದಗಿಸಲಾಗಿದೆ. 181946 ಜಾಬ್‌ ಕಾರ್ಡ್‌ಗಳನ್ನು ನೀಡಲಾಗಿದ್ದು, 23741 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಒದಗಿಸಲಾಗಿದೆ.

Advertisement

ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಜಿಲ್ಲೆಯಲ್ಲಿ 16028 ಬಚ್ಚಲು ಗುಂಡಿಗಳನ್ನು ನಿರ್ಮಿಸಲಾಗಿದೆ. ಕಳೆದ ವರ್ಷ ಯೋಜನೆಯಡಿ ವಿಶೇಷ ಒತ್ತು ನೀಡಿ, ಗ್ರಾಮೀಣ ಭಾಗದ ಸರಕಾರಿ ಶಾಲಾ ಮಕ್ಕಳಿಗೆ ಹೊಸ ಅವಕಾಶ ನೀಡುವ ಉದ್ದೇಶದಿಂದ ಸುಸಜ್ಜಿತ ಶೌಚಾಲಯ, ವಿನೂತನ ಬಾಸ್ಕೆಟ್‌ಬಾಲ್‌ ಆಟದ ಅಂಕಣ, ಕಾಂಪೌಂಡ್‌, ಮಳೆ ನೀರು ಕೊಯ್ಲು, ಆಟದ ಮೈದಾನ ನಿರ್ಮಿಸಲಾಗಿದೆ.

ಅಂಗನವಾಡಿ ಕಟ್ಟಡ, ಘನತ್ಯಾಜ್ಯ ವಿಲೇವಾರಿ ಘಟಕ, ಕಾಲುಸಂಕ, ಸಂಪರ್ಕ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಕೋ ಪಾರ್ಕ್‌ ನಿರ್ಮಾಣ, ಭೂ ಅಭಿವೃದ್ಧಿ ಕಾಮಗಾರಿ, ತೋಟಗಾರಿಕಾ ಬೆಳೆ, ಅರಣ್ಯ ಇಂಗುಗುಂಡಿ, ಹೊಸ ಕೆರೆ ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪ್ರಿಯಾಂಕಾ ವಿವರಿಸಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2021-22 ನೇ ಆರ್ಥಿಕ ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಪ್ರಸ್ತುತ ಗ್ರಾಮೀಣ ಜನರಿಗೆ ಬೇಸಿಗೆಯಲ್ಲಿ ಕೆಲಸ ನೀಡಲು, ಮುಂಗಾರಿನ ತಯಾರಿಗೆ ಹಾಗೂ ವಲಸೆ ತಡೆಯುವ ಉದ್ದೇಶದಿಂದ ದುಡಿಯೋಣ ಬಾ ಅಭಿಯಾನ ಕೈಗೊಳ್ಳಲಾಗಿದೆ. ಪ್ರಸ್ತುತ ದಿನವೊಂದಕ್ಕೆ 289 ರಿಂದ 309ರೂ.ಗೆ ಕೂಲಿ ಹೆಚ್ಚಿಸಲಾಗಿದ್ದು, ಕೂಲಿಕಾರರಿಗೆ ತುಂಬಾ ಅನುಕೂಲವಾಗಲಿದೆ. ಈ ವರ್ಷವು ಕೂಡ ಪರಿಣಾಮಕಾರಿಯಾಗಿ ಯೋಜನೆಯನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಕೈಗೊಳ್ಳಲಾಗುವುದು. ಪ್ರಿಯಾಂಕಾ ಎಂ., ಜಿಪಂ ಸಿಇಒ, ಉತ್ತರ ಕನ್ನಡ.

Advertisement

Udayavani is now on Telegram. Click here to join our channel and stay updated with the latest news.

Next