ಪಣಜಿ: ದೂಧ್‌ಸಾಗರ ಪ್ರವಾಸೋದ್ಯಮ ಸೀಸನ್ ಆರಂಭವಾಗಿದ್ದು, ಪ್ರವಾಸೋದ್ಯಮಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ಸಿಗುತ್ತಿರುವುದರಿಂದ ಇಲ್ಲಿ ವ್ಯಾಪಾರ ಮಾಡುವ ಜೀಪ್ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಡಾ. ಗಣೇಶ ಗಾಂವ್ಕರ್ ಹೇಳಿದರು.
ಮಳೆಯಿಂದಾಗಿ ಗೋವಾ ದೂಧ್‌ಸಾಗರ ಪ್ರವಾಸೋದ್ಯಮ ಆರಂಭಕ್ಕೆ ಎಂಟು ದಿನ ವಿಳಂಬವಾಗಿದ್ದು, ಇದೀಗ ದೂಧ್‌ಸಾಗರ ಪ್ರವಾಸೋದ್ಯಮಕ್ಕೆ ಚಾಲನೆ ದೊರೆತಿದೆ. ದೂಧ್‌ಸಾಗರ ಬಳಿಯ ಕುಳೆಯಲ್ಲಿ ಅರಣ್ಯ ಇಲಾಖೆಯ ಪ್ರವೇಶ ದ್ವಾರವನ್ನು ಶಾಸಕ ಡಾ. ಗಣೇಶ ಗಾಂವಕರ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಳೆ ಶಿಗಾಂವದ ಪಂಚಾಯತ್ ಅಧ್ಯಕ್ಷ ಗೋವಿಂದ ಶಿಗಾಂವಕರ್, ದೂಧ್‌ಸಾಗರ ಜಿ.ಪಂ. ಅಧ್ಯಕ್ಷ ಅಶೋಕ ಖಂಡೇಪಾರ್ಕರ್, ಕಾರ್ಯದರ್ಶಿ ಸತ್ಯವಾನ್ ನಾಯ್ಕ್, ಖಜಾಂಚಿ ಮಂಗಳದಾಸ್ ಚಿರಿ, ದಿಲೀಪ್ ಮೈರೇಕರ್, ಟ್ರೈಬೆಲೊ ಸೋಜಾ, ಅಶೋಕ್ ಗಾಂವ್ಕರ್, ಸತೀಶ್ ಸತ್ಪಾಲಕರ್, ಮತ್ತಿತರರು ಉಪಸ್ಥಿತರಿದ್ದರು.
ಈ ವರ್ಷದ ಪ್ರವಾಸೋದ್ಯಮ ಸೀಸನ್ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ಒಟ್ಟು 156 ಜೀಪ್‍ಗಳ ಮೂಲಕ ಆಗಮಿಸಿ 1092 ಪ್ರವಾಸಿಗರು ದೂಧಸಾಗರ ಜಲಪಾತವನ್ನು ವೀಕ್ಷಿಸಿದ್ದು, ಮೊದಲ ದಿನ ಕುಳೆ-ಶಿಗಾಂವ ಪಂಚಾಯತ್ ಗೆ 43,6,80 ರೂ. ಆದಾಯ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಸಕ್ತ ಗೋವಾ ಪ್ರವಾಸ ಆರಂಭವಾದ ಕಾಲದ ಹಿನ್ನೆಲೆ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶ ಪ್ರವಾಸಿಗರು ಆಗಮಿಸುವ ನಿರೀಕ್ಷೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಹೊಂದಿದೆ.