ಒಂದು ಸಿನಿಮಾದಲ್ಲಿ ಒಬ್ಬ ಹೀರೋಗೆ ಒಂದು ಅಥವಾ ಎರಡು, ತುಂಬಾ ಹೆಚ್ಚು ಅಂದ್ರೆ ಮೂವರು ಹೀರೋಯಿನ್ಸ್ ಇರೋದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೋಂದು ಸಿನಿಮಾದಲ್ಲಿ ಒಬ್ಬ ಹೀರೋಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೆರಡು ಜನ ಹೀರೋಯಿನ್ಸ್ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಸಿನಿಮಾದ ಹೆಸರು “ಡ್ಯೂಡ್’.
ಈ ಹಿಂದೆ “ರಿವೈಂಡ್’, “ರಾಮಾಚಾರಿ 2.0′ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಜೊತೆಗೆ ನಾಯಕನಾಗಿ ನಟಿಸಿದ್ದ ತೇಜ್ “ಡ್ಯೂಡ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ 12 ಜನ ನಾಯಕಿಯರು ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ “ಡ್ಯೂಡ್’ ಸಿನಿಮಾಕ್ಕೆ ಮುಹೂರ್ತ ನಡೆದಿದೆ.
ಪೂಜಾ ರಾಜು, ಚಿತ್ರಲ್ ರಂಗಸ್ವಾಮಿ, ರೋಹಿಣಿ, ಪ್ರಾಣವಿ ಗೌಡ, ಸಹನಾ ಗೌಡ, ಸಾನ್ಯಾ ಕಾವೇರಮ್ಮ, ಜೀವತಾ, ತನುಜಾ ತಿತೀರಾ, ಸೌಮ್ಯ, ಕ್ರಿಸ್ಟಿಯಾನಾ ರೊಸ್ಲಿನ್ ಜಾರ್ಚ, ಮಿಶೇಲ್ ನೊರೋನಾ, ಜೀವಿತಾ ವಸಿಷ್ಠ ಹೀಗೆ 12 ಜನ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ ರಾಜಕುಮಾರ್, ರಂಗಾಯಣ ರಘು, ಸ್ಪರ್ಶ ರೇಖಾ, ವಿಜಯ ಚೆಂಡೂರ್, ಸಂದೀಪ್ ಮಲಾನಿ ಹೀಗೆ ದೊಡ್ಡ ಕಲಾವಿದರ ತಾರಾಬಳಗ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿದೆ.
“ಡ್ಯೂಡ್’ ಸಿನಿಮಾದ ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ತೇಜ್, ಇದೊಂದು ಹೀರೋ ಅಥವಾ ಹೀರೋಯಿನ್ ಇರುವ ಸಿನಿಮಾ ಎನ್ನುವುದಕ್ಕಿಂತ ಕಂಟೆಂಟ್ ಆಧಾರಿತ ಸಿನಿಮಾ ಎನ್ನುಬಹುದು. ಈ ಸಿನಿಮಾದಲ್ಲಿ ಮಹಿಳಾ ಫುಟ್ಬಾಲ್ ತಂಡದ ಕಥೆಯಿದೆ. ಹಾಗಾಗಿ ಕಥೆಗೆ ತಕ್ಕಂತೆ ಸಿನಿಮಾದಲ್ಲಿ 12 ಜನ ನಾಯಕಿಯರಿದ್ದಾರೆ. ಪ್ರತಿ ಪಾತ್ರಕ್ಕೂ ಅದರದ್ದೇಯಾದ ಹಿನ್ನಲೆ ಮಹತ್ವವಿದೆ’ ಎಂದರು.
ಸಿನಿಮಾದ ಹಾಡುಗಳಿಗೆ ಎಮಿಲ್ ಮೊಹಮ್ಮದ್ ಸಂಗೀತ ಸಂಯೋಜಿಸುತ್ತಿದ್ದಾರೆ. ಮನೋಜ್ ದೊಡ್ಡಮನಿ ಸಾಹಿತ್ಯವಿದೆ. ಚಿತ್ರಕ್ಕೆ ಪ್ರೇಮ್ ಛಾಯಾಗ್ರಹಣ, ಆ್ಯನಿಸನ್ ಸಂಕಲನವಿದೆ.