ಮೀರತ್/ಕಾನ್ಪುರ: ಉತ್ತರ ಪ್ರದೇಶದಲ್ಲಿ ಪೊಲೀಸರ ಹತ್ಯೆ ಪ್ರಕರಣ ಸಂಬಂಧ ಎನ್‌ಕೌಂಟರ್‌ನಲ್ಲಿ ಹತನಾದ ಪ್ರಭಾತ್ ಮಿಶ್ರಾ ಆಲಿಯಾಸ್ ಕಾರ್ತೀಕೇಯ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 61ರಷ್ಟು ಫಲಿತಾಂಶ ಪಡೆದಿದ್ದಾನೆ. 10ನೇ ತರಗತಿ ಪರೀಕ್ಷೆಯಲ್ಲಿ ಶೇ.78 ರಷ್ಟು ಅಂಕ ಪಡೆದಿದ್ದನು. ಉತ್ತಮ ವಿದ್ಯಾರ್ಥಿಯಾಗಿದ್ದ ಪ್ರಭಾತ್ (16) ಅಪ್ರಾಪ್ತ ವಯಸ್ಸಿನವನಾಗಿದ್ದಾನೆ.
ಆತನನ್ನು ಪೊಲೀಸರು ವಿನಾ ಕಾರಣ ಹತ್ಯೆ ಮಾಡಿ ದ್ದಾರೆ ಎಂದು ತಾಯಿ ಗೀತಾ ಆರೋಪಿಸಿದ್ದಾರೆ. ಪೊಲೀಸರನ್ನು ಹತ್ಯೆ ಮಾಡಿದ ಘಟನೆ ಬಳಿಕ ಗ್ರಾಮ ತೊರೆದು ಹೋಗುವಂತೆ ಪುತ್ರನಿಗೆ ಸೂಚಿಸಿದ್ದಾಗಿ ಗೀತಾ ಹೇಳಿದ್ದಾರೆ. ಪೊಲೀಸರು ಮನೆಗೆ ಆಗಮಿಸಿ ಮೊಬೈಲ್ ಫೋನ್ ವಶಪಡಿಸಿಕೊಂಡ ಕಾರಣ ಪುತ್ರ ನನ್ನು ಸಂಪರ್ಕಿಸಲೂ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಪೊಲೀಸರ ಹತ್ಯೆ ಬಳಿಕ ಜು.8 ರಂದು ಪ್ರಭಾತ್‌ನನ್ನು ಫರೀದಾಬಾದ್‌ನಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಜು.9ರಂದು ಆತನನ್ನು ಕಾನ್ಪುರಕ್ಕೆ ಕರೆತರುವಾಗ ನಡೆದ ಎನ್‌ಕೌಂಟರ್‌ನಲ್ಲಿ ಮೃತ ಪಟ್ಟಿದ್ದನು. ಪ್ರಭಾತ್ ಹತ್ಯೆಯಾದ 10 ದಿನಗಳ ಬಳಿಕ ಫಲಿತಾಂಶ ಹೊರಬಿದ್ದಿದೆ.
ಆಧಾರ್ ಕಾರ್ಡ್‌ನಲ್ಲಿ ಪ್ರಭಾತ್ ಮಿಶ್ರಾನ ಜನ್ಮ ದಿನಾಂಕ 2004ರ ಮೇ 27 ಎಂದು ಮುದ್ರಿತವಾಗಿದೆ. ಕಾನ್ಪುರ ವಲಯದ ಐಜಿಪಿ ಮೋಹಿತ್ ಅಗರ್ವಾಲ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿ ಮಿಶ್ರಾನ ವಯಸ್ಸಿನ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.
ರೌಡಿ ಸಾವು: ಉತ್ತರ ಪ್ರದೇಶದ ಮೀರತ್‌ನಲ್ಲಿ ಕುಖ್ಯಾತ ರೌಡಿಯನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ದೀಪಕ್ ಸಿಧು ಎಂಬಾತನ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಬ್ ಇನ್‌ಸ್ಪೆಕ್ಟರ್ ಗಾಯಗೊಂಡಿದ್ದಾರೆ. ಅಸುನೀಗಿದ ರೌಡಿಯ ಬಗ್ಗೆ ಮಾಹಿತಿ ನೀಡಿದರೆ 50 ಸಾವಿರ ರೂ. ಬಹುಮಾನ ಪ್ರಕಟಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಅಜಯ ಕುಮಾರ್ ಸಹಾನಿ ಗುರುವಾರ ತಿಳಿಸಿದ್ದಾರೆ.
ದೀಪಕ್ ಸಿಧು ಮತ್ತು ಆತನ ಸಹಚರ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಹೀಗಾಗಿ ಆತನನ್ನು ಸೆರೆ ಹಿಡಿಯಲು ಹೋದ ಸಂದರ್ಭದಲ್ಲಿ ರೌಡಿ ದೀಪಕ್ ಪೊಲೀಸರತ್ತ ಗುಂಡು ಹಾರಿಸಿದ. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ಆತ ಗಾಯಗೊಂಡ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಆತ ಅಸುನೀಗಿದ. ಈ ಸಂದರ್ಭದಲ್ಲಿ ಆತನ ಸಹಚರ ಪರಾರಿಯಾಗಿದ್ದಾನೆ ಸಹಾನಿ ತಿಳಿಸಿದ್ದಾರೆ.