ನಿರ್ಮಾಪಕ ದೊಡ್ಡ ಮಟ್ಟದಲ್ಲಿ ನಂಬಿಕೊಂಡಿದ್ದ, “ಮಿನಿಮಮ್ ಗ್ಯಾರಂಟಿ’ ಎಂದುಕೊಂಡಿದ್ದ ಟಿವಿ ರೈಟ್ಸ್ ಈಗ ಕೈಗೆಟುಕದ ದ್ರಾಕ್ಷಿ. ಆಡಿಯೋದಿಂದ ಮೂರು ರೂಪಾಯಿಯೂ ಹುಟ್ಟಲ್ಲ ಅನ್ನೋ ಬೇಸರ, ಜನ ಥಿಯೇಟರ್‌ಗೆ ಬರಲ್ಲ ಎಂಬ ಕೂಗು ಮತ್ತೂಂದು ಕಡೆ. ಮಳೆ, ಗಾಳಿ, ಮಕ್ಕಳ ಪರೀಕ್ಷೆ, ಕ್ರಿಕೆಟ್ … ಇನ್ನೊಂದು-ಮತ್ತೂಂದುಗಳಿಂದಲೂ ಸಿನಿಮಾಗಳಿಗೆ ತೊಂದರೆಯಾಗುತ್ತದೆ ಎಂಬ ಕೂಗು ಬೇರೆ. ಎಲ್ಲದರ ಎಫೆಕ್ಟ್ ಸಿನಿಮಾ ಮೇಲೆ ಕೋಟಿ ಸುರಿದ ನಿರ್ಮಾಪಕ ನಿಗಾಗುತ್ತಿದೆ. ಈ ಮೂಲಕ ನಿರ್ಮಾಪಕನ ವ್ಯಾಪಾರದ ಪ್ರಮುಖ ಬಾಗಿಲುಗಳು ಮುಚ್ಚುತ್ತಿವೆ ಎಂದರೆ ತಪ್ಪಲ್ಲ. ಆದರೆ, ಎಲ್ಲಾ ಬಾಗಿಲುಗಳು ಮುಚ್ಚಿದಾಗ ದೇವರು ಇನ್ನೆಲ್ಲೋ ಒಂದು ಕಿಂಡಿಯ ಮೂಲಕ ಬೆಳಕು ಕರುಣಿಸುತ್ತಾನೆ ಎಂಬ ಮಾತಿನಂತೆಯೇ ಸದ್ಯ ನಿರ್ಮಾಪಕರಿಗೆ ಆಸರೆಯಾಗಿರೋದು ಡಬ್ಬಿಂಗ್ ರೈಟ್ಸ್.
ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ, ಹೊಸ ಚಿತ್ರತಂಡಗಳ ಮೊಗದಲ್ಲಿ ನಗು ಮೂಡಿಸುತ್ತಿರುವುದು ಹಿಂದಿ ಡಬ್ಬಿಂಗ್ ರೈಟ್ಸ್. ಹೌದು, ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಚಿತ್ರಗಳ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗಿವೆ. ಕೆಲವು ವರ್ಷಗಳ ಹಿಂದೆ ಕೇವಲ ಸ್ಟಾರ್ ಸಿನಿಮಾಗಳ ಹಿಂದಿ ಡಬ್ಬಿಂಗ್ ರೈಟ್ಸ್ ಅಷ್ಟೇ ಮಾರಾಟವಾಗುತ್ತಿತ್ತು. ಆದರೆ, ಈಗ ಕನ್ನಡ ಚಿತ್ರರಂಗದಲ್ಲಿ ಹಿಂದಿ ಡಬ್ಬಿಂಗ್ ರೈಟ್ಸ್ ನಿರ್ಮಾಪಕನ ವ್ಯಾಪಾರದ ಒಂದು ಪ್ರಮುಖ ಮೂಲವಾಗಿದೆ. ಅದು ಹೊಸಬರಿಂದ ಹಿಡಿದು ಸ್ಟಾರ್‌ಗಳವರೆಗೂ. ಮೊದಲೇ ಹೇಳಿದಂತೆ ತೆಲುಗು-ತಮಿಳಿಗಿಂತ ಹಿಂದಿ ಭಾಷೆಯ ಡಬ್ಬಿಂಗ್ ರೈಟ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ ಮತ್ತು ಇವತ್ತು ಚಾಲ್ತಿಯಲ್ಲಿರೋದು ಕೂಡಾ ಅದೇ. ಸಿನಿಮಾ ಆರಂಭವಾಗುತ್ತಿದ್ದಂತೆ ಹಿಂದಿ ಡಬ್ಬಿಂಗ್ ರೈಟ್ಸ್‌ನ ಮಾತುಕತೆ ನಡೆಯುತ್ತದೆ ಮತ್ತು ಬಹುತೇಕ ನಿರ್ಮಾಪಕರು ಮಾರಾಟ ಮಾಡುತ್ತಾರೆ ಕೂಡಾ.
ಸ್ಟಾರ್‌ಗಳಿಗೆ ಕೋಟಿ-ಹೊಸಬರಿಗೆ ಲಕ್ಷ: ಕನ್ನಡ ಚಿತ್ರಗಳ ಹಿಂದಿ ಡಬ್ಬಿಂಗ್ ರೈಟ್ಸ್‌ಗಳು ಕೋಟಿ ಲೆಕ್ಕದಲ್ಲಿ ಮಾರಾಟವಾಗುತ್ತಿವೆ. ಅದರಲ್ಲೂ ಸ್ಟಾರ್ ಸಿನಿಮಾ ಮಾಡುವವರಿಗೆ ಇದೊಂದು ದೊಡ್ಡ ಮೊತ್ತದ ಆದಾಯ ಎಂದರೆ ತಪ್ಪಲ್ಲ. ಅದರಲ್ಲೂ ಹೆಚ್ಚು ಜನಪ್ರಿಯತೆ ಹೊಂದಿರುವ, ಪರಭಾಷೆಯ ಮಂದಿಗೂ ಪರಿಚಿತನಾಗಿರುವ ಸ್ಟಾರ್ ಆದರೆ, ವ್ಯಾಪಾರ ವಹಿವಾಟು ಇನ್ನೂ ಜೋರಾಗಿರುತ್ತದೆ. ಸುದೀಪ್, ದರ್ಶನ್, ಪುನೀತ್, ಯಶ್, ಶಿವರಾಜ್‌ಕುಮಾರ್‌ನಂತಹ ಸ್ಟಾರ್‌ಗಳ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಕೋಟಿ ಮೊತ್ತಕ್ಕೆ ಮಾರಾಟವಾಗುತ್ತವೆ. ಹಿಂದಿ ಡಬ್ಬಿಂಗ್ ವಿಚಾರದಲ್ಲಿ ಸುದೀಪ್, ದರ್ಶನ್, ಪುನೀತ್ ಅವರ ಚಿತ್ರಗಳು ಹೆಚ್ಚು ಬೇಡಿಕೆಯಲ್ಲಿವೆ. ಐದಾರು ಕೋಟಿಗೂ ಅಧಿಕ ಮೊತ್ತದಲ್ಲಿ ಇವರ ಸಿನಿಮಾಗಳ ಹಿಂದಿ ಡಬ್ಬಿಂಗ್
ರೈಟ್ಸ್‌ಗಳು ಮಾರಾಟವಾಗುತ್ತಿವೆ. ಸ್ಟಾರ್‌ಗಳಿಗೆ ಕೋಟಿಯಾದರೆ, ಇತರ ನಟರ ಡಬ್ಬಿಂಗ್ ರೈಟ್ಸ್‌ಗಳು ಕೂಡಾ ಲಕ್ಷ ಬೆಲೆಗೆ ಮಾರಾಟವಾಗುವಲ್ಲಿ ಹಿಂದೆ ಬಿದ್ದಿಲ್ಲ.
15 ಲಕ್ಷದಿಂದ ಆರಂಭವಾಗಿ ಕೋಟಿವರೆಗೆ ಡಬ್ಬಿಂಗ್ ರೈಟ್ಸ್ ಗಳು ಮಾರಾಟವಾಗುತ್ತಿವೆ. ನೇರವಾಗಿ ಮುಂಬೈನಿಂದ ಬಂದು ಬಿಝಿನೆಸ್ ಮಾಡಿಕೊಂಡು ಹೋಗುತ್ತಾರೆ. ಹಾಗೆ ಡಬ್ ಆದ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುತ್ತವೆ. ಇತ್ತೀಚೆಗೆ ಸುದೀಪ್ ಅವರ “ಕೋಟಿಗೊಬ್ಬ-2′ ಚಿತ್ರವು “ಗೋಲಿಮಾರ್-2′ ಎಂಬ ಹೆಸರಿನಲ್ಲಿ ಡಬ್ ಆಗಿ ಟಿವಿಯಲ್ಲಿ ಪ್ರಸಾರವಾಗಿತ್ತು.
ಆ್ಯಕ್ಷನ್‌ಗೆ ಡಿಮ್ಯಾಂಡ್: ಟಿವಿ ರೈಟ್ಸ್ ಪಡೆದುಕೊಳ್ಳುವಾಗ ಒಂದಷ್ಟು ನಿಯಮಗಳು ಅನ್ವಯವಾಗುತ್ತದೆ. “ಎ’ ಪ್ರಮಾಣ ಪತ್ರ ಇರಬಾರದು, ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತಿರಬೇಕೆಂಬ ನಿಯಮಗಳಿರುತ್ತದೆ. ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗುವಲ್ಲೂ ಒಂದಷ್ಟು ಅಲಿಖೀತ ಷರತ್ತುಗಳು ಅನ್ವಯವಾಗುತ್ತದೆ. ಅದರಲ್ಲಿ ಮುಖ್ಯವಾದುದು ಆ್ಯಕ್ಷನ್. ಸಿನಿಮಾದಲ್ಲಿ ಭರ್ಜರಿಯಾದ ಫೈಟ್, ರಗಡ್ ಲೊಕೇಶನ್ ಇದ್ದರೆ ನಿಮ್ಮ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್‌ಗೆ ಹೆಚ್ಚಿನ ಬೇಡಿಕೆ ಬರುತ್ತದೆ. ನಿಮ್ಮ ಸಿನಿಮಾದಲ್ಲಿ ಭರ್ಜರಿಯಾದ ಫೈಟ್‌ಗಳೆಷ್ಟಿವೆ ಅನ್ನೋದರ ಮೇಲೆ ನಿಮ್ಮ ಡಬ್ಬಿಂಗ್ ರೈಟ್ಸ್ ಏರುತ್ತದೆ. ಇದರ ಜೊತೆಗೆ ಪಂಚಿಂಗ್ ಡೈಲಾಗ್, ಗ್ಲಾಮರಸ್, ಅದ್ಭುತ ಲೊಕೇಶನ್‌ಗಳು ಹಿಂದಿ ಡಬ್ಬಿಂಗ್ ರೈಟ್ಸ್ ಬೆಲೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಡಬ್ಬಿಂಗ್ ರೈಟ್ಸ್ ನಿರ್ಮಾಪಕರಿಗೆ ಹಣಕಾಸಿನ ನೆರವು ನೀಡುತ್ತಿದೆ ನಿಜ. ಆದರೆ, ಇದರ ಪರಿಣಾಮವಾಗಿ ಸಿನಿಮಾಗಳು ಅನಾವಶ್ಯಕವಾಗಿ ಹೆಚ್ಚು ಕಮರ್ಷಿಯಲ್ ಆಗುತ್ತಿವೆ. ಫೈಟ್ ಅಗತ್ಯವೇ ಇಲ್ಲದ ಕಥೆಗಳಿಗೆ ಫೈಟ್ ಇಡುವಂತೆ, ಒಂದು ಫೈಟ್ ಇರುವ ಜಾಗಕ್ಕೆ ಮೂರು ಫೈಟ್ ಸೇರಿಸುವಂತೆ ಮಾಡುವಲ್ಲಿ ಹಿಂದಿ ಡಬ್ಬಿಂಗ್ ರೈಟ್ಸ್ ಪಾತ್ರವೂ ಇದೆ ಎಂದರೆ ತಪ್ಪಲ್ಲ. ಅತ್ತ ಕಡೆ ಟಿವಿ ರೈಟ್ಸ್ ಹೋಗದೇ, ಇತ್ತ ಕಡೆ ಪ್ರೇಕ್ಷಕನೂ ಬಾರದೇ ಕೈ ಸುಟ್ಟುಕೊಳ್ಳುವ ಬದಲು ಮೂರು ಫೈಟ್ ಸೇರಿಸಿ 50-60 ಲಕ್ಷ ಡಬ್ಬಿಂಗ್ ರೈಟ್ಸ್ ಆದರೂ ಗಿಟ್ಟಿಸಿಕೊಳ್ಳುವ ಎಂಬ ಲೆಕ್ಕಾಚಾರಕ್ಕೆ ನಿರ್ಮಾಪಕರು ಇಳಿದಿರುವುದು ಸುಳ್ಳಲ್ಲ.
ಈಗಾಗಲೇ ಸ್ಟಾರ್‌ಗಳ ಎಲ್ಲಾ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಮಾರಾಟವಾಗಿವೆ. ಜೊತೆಗೆ “ಧೈರ್ಯಂ’, “ಪ್ರಭುತ್ವ’, “ರಾಜ ಲವ್ಸ್ ರಾಧೆ’, “ಕನಕ’, “ಕ್ರ್ಯಾಕ್’, “ಟೈಸನ್’, “ಮರಿ ಟೈಗರ್’, “ರಗಡ್’, “ಸಿಎಂ’, “ಫೈಟರ್’ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗಿರುವ ಚಿತ್ರಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕನ್ನಡ ಸಿನಿಮಾಗಳ ಹಿಂದಿ ಡಬ್ಬಿಂಗ್ ರೈಟ್ಸ್ ಮಾರಾಟವಾಗುತ್ತಿರೋದು ಒಂದು ಉತ್ತಮ ಬೆಳವಣಿಗೆ ಎಂಬುದು ನಿರ್ಮಾಪಕ ಕಂ ವಿತರಕ ಜಾಕ್ ಮಂಜು ಅವರ ಮಾತು. “ಹಿಂದಿ ಡಬ್ಬಿಂಗ್ ರೈಟ್ಸ್‌ನಿಂದ ಅದೆಷ್ಟೋ ನಿರ್ಮಾಪಕರಿಗೆ ಸಹಾಯವಾಗುತ್ತಿದೆ. ಇವತ್ತು ಟಿವಿ ರೈಟ್ಸ್‌ಗೆ ಬೇಡಿಕೆ ಕಡಿಮೆಯಾಗಿರುವಾಗ ಡಬ್ಬಿಂಗ್ ರೈಟ್ಸ್ ಮೂಲಕ ಕನ್ನಡ ಚಿತ್ರ ನಿರ್ಮಾಪಕರಿಗೆ ಸಹಾಯವಾಗುತ್ತಿದೆ’ ಎನ್ನುತ್ತಾರೆ. ನಟ ವಿನೋದ್ ಪ್ರಭಾಕರ್ ಕೂಡಾ ಹಿಂದಿ ಡಬ್ಬಿಂಗ್ ರೈಟ್ಸ್‌ನಿಂದ ಖುಷಿಯಾಗಿದ್ದಾರೆ. “ನಾನು ಆರಂಭದಿಂದ ಆ್ಯಕ್ಷನ್ ಸಿನಿಮಾ ಮಾಡಿಕೊಂಡು ಬಂದಿರುವುದರಿಂದ ಅದರ ಪ್ರತಿಫಲ ಇವತ್ತು ಸಿಗುತ್ತಿದೆ. ಇವತ್ತು ನನ್ನ ಸಿನಿಮಾಗಳ ಹಿಂದಿ ಡಬ್ಬಿಂಗ್ ರೈಟ್ಸ್ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿರುವುದು ಖುಷಿಯ ವಿಚಾರ. ಡಬ್ಬಿಂಗ್ ರೈಟ್ಸ್‌ನ ಅರ್ಧದಷ್ಟು ಟಿವಿ ರೈಟ್ಸ್ ಸಿಗುತ್ತಿದೆ’ ಎನ್ನುತ್ತಾರೆ ವಿನೋದ್.
ರವಿಪ್ರಕಾಶ್ ರೈ