ಯುಎಇ: ದುಬೈ(ಸಂಯುಕ್ತ ಅರಬ್ ಸಂಸ್ಥಾನ) ದೊರೆ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ಅವರ 6ನೇ ಪತ್ನಿ ರಾಣಿ ಹಯಾ ಬಿಂತ್ ಅಲ್ ಹುಸೈನ್ ತನ್ನ ಅಂಗರಕ್ಷಕನ ಜತೆಗಿನ ಸಂಬಂಧವನ್ನು ಮುಚ್ಚಿಡಲು ಕೋಟ್ಯಂತರ ರೂಪಾಯಿ ಹಣ ಮತ್ತು ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಿರುವುದಾಗಿ ವರದಿಯೊಂದು ತಿಳಿಸಿದೆ.
ಶೇಕ್ ಮೊಹಮ್ಮದ್ ಅವರು ಯುಎಇ ಉಪಾಧ್ಯಕ್ಷರಾಗಿದ್ದು, ಅಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮಾಜಿ ಸದಸ್ಯೆ ಹಯಾ(30ವರ್ಷ) ಅವರನ್ನು 2004ರಲ್ಲಿ ವಿವಾಹವಾಗಿದ್ದರು. ಇದೀಗ 46ರ ಹರೆಯದ ಜೋರ್ಡಾನ್ ರಾಣಿ ಹಯಾ ಬಿಂತ್ ಅಂಗರಕ್ಷಕ ರುಸ್ಸೆಲ್ಲ್ ಫ್ಲೋವರ್ಸ್ ಜತೆ ರಹಸ್ಯವಾಗಿ ಸಂಬಂಧ ಇಟ್ಟುಕೊಂಡಿದ್ದರು.
ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಹೊರಗೆ ಬಹಿರಂಗಪಡಿಸಬಾರದು ಎಂದು ಹಯಾ ರುಸ್ಸೆಲ್ಲ್ ಗೆ 12 ಸಾವಿರ ಡಾಲರ್ ಬೆಲೆಬಾಳುವ ವಾಚ್ ಮತ್ತು ವಿಂಟೇಜ್ ಗನ್ ಸೇರಿದಂತೆ ಅಪಾರ ಪ್ರಮಾಣದ ಉಡುಗೊರೆ, 12 ಕೋಟಿ ರೂಪಾಯಿಯಷ್ಟು ಹಣ ನೀಡಿರುವುದಾಗಿ ಮೇಲ್ ಆನ್ ಲೈನ್ ವರದಿ ಮಾಡಿದೆ.
37 ವರ್ಷದ ರುಸ್ಸೆಲ್ಲ್ ಫ್ಲೋವರ್ಸ್ ನನ್ನು ರಾಣಿ ಹಯಾ ದುರ್ಮಾಗಕ್ಕೆ ಎಳೆದಿದ್ದಾರೆ. ಅಷ್ಟೇ ಅಲ್ಲ ಫ್ಲೋವರ್ಸ್ ಯಾವಾಗಲೂ ತನ್ನ ಪರವಾಗಿಯೇ ಇರಬೇಕು ಎಂಬ ದೃಷ್ಟಿಕೋನದಿಂದ ಅಪಾರ ಪ್ರಮಾಣದ ಹಣ ಬಳಕೆ ಮಾಡುತ್ತಿರುವುದಾಗಿ ಮೇಲ್ ಆನ್ ಲೈನ್ ವರದಿ ತಿಳಿಸಿದೆ.
ಇದನ್ನೂ ಓದಿ:ಮುಂಬೈ: NCB ಅಧಿಕಾರಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಡ್ರಗ್ ಪೆಡ್ಲರ್ಸ್, ಆರೋಪಿಗಳ ಸೆರೆ
ರುಸ್ಸೆಲ್ಲ್ ಭಾರೀ ಮೊತ್ತದ ಹಣ ಮತ್ತು ಐಶಾರಾಮಿ ಉಡುಗೊರೆಯ ಆಮಿಷಕ್ಕೆ ಒಳಗಾಗಿರುವುದಾಗಿ ರುಸ್ಸೆಲ್ಲ್ ಪತ್ನಿ ಶಂಕಿಸಿದ್ದು, ಹಯಾ ದುಬಾರಿ ಮೊತ್ತದ ಉಡುಗೊರೆಗಳನ್ನು ಕೊಟ್ಟು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿರುವುದಾಗಿ ರುಸ್ಸೆಲ್ಸ್ ಫ್ಲೋವರ್ಸ್ ಪತ್ನಿಯ ಗೆಳತಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಹಯಾ ಮತ್ತು ತನ್ನ ಪತಿಯ ನಡುವೆ ಸಂಬಂಧ ಇರುವ ಕುರಿತು ತಿಳಿದ ನಂತರ ಆಕೆ ಸಂಪೂರ್ಣವಾಗಿ ಫ್ಲೋವರ್ಸ್ ನಿಂದ ದೂರ ಉಳಿದು ವಿಚ್ಛೇದನ ನೀಡಲು ನಿರ್ಧರಿಸಿದ್ದಳು ಎಂದು ವರದಿ ತಿಳಿಸಿದೆ.
ಹಯಾ ಮತ್ತು ದುಬೈ ದೊರೆ ನಡುವಿನ ವಿಚ್ಛೇದನ ಪ್ರಕರಣ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ರಾಣಿ ಹಯಾ ಮತ್ತು ಫ್ಲೋವರ್ಸ್ ನಡುವಿನ ಸಂಬಂಧ ಬೆಳಕಿಗೆ ಬಂದಿರುವುದಾಗಿ ವರದಿ ಹೇಳಿದೆ.