15% ಅಪಾರ್ಟ್‌ಮೆಂಟ್ ಬಾಡಿಗೆ ದರ ಇಳಿಕೆ
13% ಕುಸಿದ ಷೇರು ಮಾರುಕಟ್ಟೆ
26% ವ್ಯಾಪಾರ ಲೈಸೆನ್ಸ್ ನೀಡಿಕೆ ಕುಸಿತ
0% ಗೆ ಇಳಿದ ದುಬೈ ಏರ್‌ಪೋರ್ಟ್ ಪ್ರಯಾಣಿಕರ ಏರಿಕೆ ಗತಿ
19.5 % ಬಜೆಟ್‌ನಲ್ಲಿ ಉಂಟಾದ ಕುಸಿತ
ದುಬಾೖ: ಗಲ್ಫ್ ದೇಶಗಳ ಪೈಕಿ ದುಬೈ ಕಳೆದ ಎರಡು ದಶಕಗಳಲ್ಲಿ ಶ್ರೀಮಂತರ ನಾಡಾಗಿತ್ತು. ವಿವಿಧ ದೇಶಗಳ ಶ್ರೀಮಂತರು ಇಲ್ಲಿ ಆಸ್ತಿ ಖರೀದಿಸಿದ್ದರು. ಆದರೆ ತೈಲ ಬೆಲೆ ಇಳಿಕೆಯಿಂದಾಗಿ ಈ ಎಲ್ಲವೂ ಸತ್ವ ಕಳೆದುಕೊಂಡಿದೆ. ದುಬಾೖನ ಐಷಾರಾಮಿ ಜುಮೈರಾ ಬೀಚ್ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 15ರಷ್ಟು ಬಾಡಿಗೆ ಇಳಿಕೆಯಾಗಿದೆ. ಇನ್ನು ಒಟ್ಟಾರೆ ದುಬೈನಲ್ಲಿ ಆಸ್ತಿ ಮೌಲ್ಯವೂ 2014ಕ್ಕೆ ಹೋಲಿಸಿದರೆ ಶೇ. 15ರಷ್ಟು ಕುಸಿದಿದೆ. ಷೇರು ಮಾರುಕಟ್ಟೆ ಈ ವರ್ಷವೊಂದರಲ್ಲೇ ಶೇ. 13ರಷ್ಟು ಇಳಿಕೆಯಾಗಿದೆ.
2018ರ ಎರಡನೇ ತ್ತೈಮಾಸಿಕದಲ್ಲಿ 4,722 ಹೊಸ ವ್ಯಾಪಾರ ಲೈಸೆನ್ಸ್ ನೀಡಲಾಗಿದೆ. 2016ರ ಇದೇ ಅವಧಿಗೆ ಹೋಲಿಸಿದರೆ ಇದು ಶೇ.26ರಷ್ಟು ಇಳಿಕೆ ಕಂಡಿದೆ. ಹೀಗಾಗಿ ಔದ್ಯಮಿಕ ಬೆಳವಣಿಗೆ ಕೂಡ ಕುಂಠಿತಗೊಂಡಿದೆ. ದುಬೈ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಏರಿಕೆಗತಿ ಶೂನ್ಯಕ್ಕೆ ಇಳಿದಿದೆ. ಕಳೆದ 15 ವರ್ಷಗಳಿಂದಲೂ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲಿತ್ತು. ಏಷ್ಯಾ ಮತ್ತು ಯುರೋಪ್ ಮಧ್ಯೆ ಸಂಚರಿಸುವ ವಿಮಾನಯಾನ ಕಂಪೆನಿಗಳು ದುಬೈನಲ್ಲಿ ಕೇಂದ್ರೀಕರಿಸಿದ್ದು, ಇವು ಆಕರ್ಷಣೆ ಕಳೆದುಕೊಂಡಿವೆ. ದುಬೈ ಸೇರಿದಂತೆ ಗಲ್ಫ್ ದೇಶಗಳ ಆರ್ಥಿಕ ಚಟುವಟಿಕೆ ಕುಸಿತಗೊಂಡಿದ್ದು ತೈಲ ಬೆಲೆ ಇಳಿಕೆಯಿಂದಾದರೆ ತಾತ್ಕಾಲಿಕ ಎನ್ನಬಹುದು. ಆದರೆ ಸಾಂಪ್ರದಾಯಿಕ ಉದ್ಯಮದಲ್ಲೇ ಇಳಿಕೆ ಕಂಡಿರುವುದು ಇದರ ಪರಿಣಾಮ ದೀರ್ಘಕಾಲದವರೆಗೆ ಇರುವ ಭೀತಿ ಉಂಟಾಗಿದೆ.
ಈ ವರ್ಷದಲ್ಲಿ ಗಲ್ಫ್ ದೇಶಗಳಲ್ಲಿ ಹೂಡಿಕೆ ಪ್ರಮಾಣ ಚೇತರಿಸಿಕೊಂಡಿದೆಯಾದರೂ, ಬಹುತೇಕ ಹೂಡಿಕೆ ಸರಕಾರಿ ವಲಯದಿಂದಲೇ ನಡೆದಿದೆ. 2020ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಸಲಿದ್ದು, ಇದಕ್ಕಾಗಿ ಭಾರಿ ಹೂಡಿಕೆ ಮಾಡಲಾಗಿದೆ. ಇನ್ನೊಂದೆಡೆ ಬಜೆಟ್ ಮೊತ್ತ ಶೇ. 19.5ರಷ್ಟು ಕುಸಿತ ಕಂಡಿದೆ.