ಮುಂಬಯಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬಾಯಿ 2018 ನವೆಂಬರ್ 23 ಮತ್ತು 24 ರಂದು ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಆ ನಿಮಿತ್ತ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಜು. 27 ರಂದು ದುಬೈಯ ಮಾರ್ಕೊಪೋಲ್ ಹೊಟೇಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸರ್ವೋತ್ತಮ ಶೆಟ್ಟಿ ಅವರು ಮಾತನಾಡಿ ವಿಶ್ವ ತುಳು ಸಮ್ಮೇಳನ ದುಬೈ-2018ರ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಭೆಯಲ್ಲಿ ಸಲಹ ಸಮಿತಿಯ ಸದ್ಯರುಗಳಾದ ಬಿ. ಕೆ. ಗಣೇಶ್ ರೈ, ಶೋಧನ್ ಪ್ರಸಾದ್, ದೇವ್‌ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಲಹಾ ಸಮಿತಿಯ ಸದಸ್ಯ ಶೋಧನ್ ಪ್ರಸಾದ್ ಸ್ವಾಗತಿಸಿದರು.
ಯುಎಇ ಎಕ್ಸೇಂಜ್ ಗ್ಲೋಬಲ್ ಅಪರೇಶನ್ಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು ವಿಶ್ವ ತುಳು ಸಮ್ಮೇಳನ ದುಬೈ-2018 ಅಧಿಕೃತ ಲಾಂಛನ ಲೋಕಾರ್ಪಣೆ ಮಾಡಿ ಸಮ್ಮೇಳನದ ಪೂರ್ವತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಶಸ್ಸಿಗೆ ಶುಭ ಹಾರೈಸಿದರು.
ತುಳು ಸಮ್ಮೇಳನ ದುಬೈ- 2018 ಸಮ್ಮೇಳನದ ಸವಿ ನೆನಪಿಗಾಗಿ ಲೋಕಾ ರ್ಪಣೆಗೊಳ್ಳಲಿರುವ ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿ ಪ್ರಕಟಣೆ ನೀಡಿ ಆಹ್ವಾನಿಸಲಾಗಿದ್ದು ಈವರೆಗೆ 166 ಹೆಸರುಗಳನ್ನು 22 ಮಂದಿ ತುಳು ಅಭಿಮಾನಿಗಳಿಂದ ಸ್ವೀಕರಿಸಲಾಗಿತ್ತು.
ಹಿರಿಯ ಸಾಹಿತಿಗಳಾದ ಡಾ| ಬಿ. ಎ. ವಿವೇಕ್ ರೈ ಮತ್ತು ಮುಂಬುಯಲ್ಲಿ ನೆಲೆಸಿರುವ ಡಾ| ಸುನಿತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಬಿ. ಕೆ. ಗಣೇಶ್ ರೈ ಸೂಚಿಸಿದ್ದ ವಿಶ್ವ ತುಳು ಐಸಿರಿ ಹೆಸರನ್ನು ಆಯ್ಕೆ ಮಾಡಲಾಯಿತು.
ಶೋಧನ್ ಪ್ರಸಾದ್ ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಹಂತದ ಕಾರ್ಯ ಯೋಜನೆಯನ್ನು ವಿವರಿಸಿದರು. ಅಖೀಲ ಭಾರತ ತುಳು ಒಕ್ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಭಾಗಿತ್ವದಲ್ಲಿ ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ ಜರಗಲಿದೆ.