ದುಬೈ: ಯೆಮನ್ ನಲ್ಲಿ ಅಲ್ ಹೌತಿ ಸೇನೆಯಿಂದ ಬಂಧಿತನಾಗಿದ್ದ ಭಾರತೀಯ ಮೂಲದ ದುಬೈ ಉದ್ಯಮಿ ಸುಮಾರು ಐದು ತಿಂಗಳ ಬಳಿಕ ಮತ್ತೆ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಅವರು ಯೆಮನ್ ನಲ್ಲಿ ಬಂಡುಕೋರರಾದ ಹೌತಿಗಳ ಕೈಯಲ್ಲಿ ಸೆರೆಯಾಗಿದ್ದರು. ಬಳಿಕ ರಾಜತಾಂತ್ರಿಕವಾಗಿ ಅವರನ್ನು ಭಾರತ ವಾಪಾಸು ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂಬಯಿ ವಿಮಾನ ನಿಲ್ದಾಣದ ಮೂಲಕ ಬರಮಾಡಿಕೊಳ್ಳಲಾಗಿದೆ.
ಆಗಿದ್ದೇನು?
ಮೂಲತಃ ತಿರುವನಂತಪುರಂ ಮೂಲದವರಾದ ಸುರೇಶ್ ಕುಮಾರ್ ಪಿಳ್ಳೈ ಅವರು ವ್ಯಾಪಾರ ಪ್ರವಾಸಕ್ಕಾಗಿ ಯೆಮನ್ ಗೆ ತೆರಳಿದ್ದರು. ಆದರೆ ಜುಲೈ 2ರಂದು ಅಡೆನ್ ನಲ್ಲಿ ಇಳಿದ ಕೆಲವೇ ದಿನಗಳಲ್ಲಿ ನಾಪತ್ತೆಯಾಗಿದ್ದರು. ಬಳಿಕ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದು ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ಗಾಬರಿಗೆ ಕಾರಣವಾಗಿತ್ತು.
ಅವರ ನಾಪತ್ತೆಯ ಬಗ್ಗೆ ಗಲ್ಫ್ ನ್ಯೂಸ್ ಮೊದಲ ಬಾರಿ ವರದಿ ಮಾಡಿತ್ತು. ಅವರ ನಾಪತ್ತೆ ವಿಚಾರ ವರದಿಯು ಈ ಪ್ರಕರಣವನ್ನು ಭಾರತೀಯ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತಂದಿತ್ತು. ಇದರಿಂದ ಚುರುಕಾದ ಭಾರತೀಯ ರಾಯಭಾರಿ ಇಲಾಖೆ ಪಿಳ್ಳೈ ಅವರನ್ನು ಜೈಲಿನಿಂದ ಹೊರ ತರಲು ಕಾರ್ಯೋನ್ಮುಖವಾಯಿತು.
ಯೆಮನ್ ನ ಭಾರತೀಯ ರಾಯಭಾರಿ ಅಶೋಕ್ ಕುಮಾರ್ ಮತ್ತು ಅವರ ಕಾರ್ಯದರ್ಶಿ ಅನಿಲ್ ಕುಮಾರ್ ಅವರು ಇದಕ್ಕೆ ತತ್‌ಕ್ಷಣ ಸ್ಪಂದಿಸಿದ್ದಾರೆ. ಇದಕ್ಕೆ ಯುಎಇನ ಪ್ರಮುಖ ನಾಯಕರು ಬೆಂಬಲಾಗಿದ್ದರು. ಪಿಳ್ಳೈ ಅವರನ್ನು ಮತ್ತೆ ಸ್ವದೇಶಕ್ಕೆ ಕರೆತರಲು ಕಾರಣವಾದ ರಾಯಭಾರಿ ಕಚೇರಿಗೆ ಮತ್ತು ಗಲ್ಫ್ ನ್ಯೂಸ್ ಗೆ ಪಿಲ್ಲೆ„ ಕುಟುಂಬ ವಂದನೆ ಸಲ್ಲಿಸಿದೆ.