Advertisement

ಡಿಟಿಎಚ್‌, ಕೇಬಲ್‌ ಹೊಸ ನೀತಿಯ ಗೊಂದಲ

12:30 AM Dec 22, 2018 | |

ದೇಶಾದ್ಯಂತ ಡಿಟಿಎಚ್‌ ಹಾಗೂ ಕೇಬಲ್‌ ಟಿವಿ ಸಂಪರ್ಕಗಳು ಡಿ.29ರಿಂದ ಹೊಸ ದರ ಶೈಲಿಗೆ ಬದಲಾಗಲಿವೆ. ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ ಹೊರಡಿಸಿರುವ ನಿಯಮದ ಪ್ರಕಾರ ಪ್ರತಿ ಚಾನೆಲ್‌ಗ‌ಳನ್ನೂ ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬೇಕಿದೆ. ಪ್ರತಿ ಚಾನೆಲ್‌ಗ‌ೂ ದರ ನಿಗದಿಸಿ ಅದರಂತೆ ಗ್ರಾಹಕರು ತಮಗೆ ಯಾವ ಚಾನೆಲ್‌ಗ‌ಳು ಬೇಕೋ ಅಷ್ಟನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಇದು ಮಾಸಿಕ ಬಿಲ್‌ ಮೊತ್ತ ಎಷ್ಟು ಪಾವತಿ  ಮಾಡಬೇಕು ಎಂಬ ನಿರ್ಧಾರವನ್ನು ಗ್ರಾಹಕರೇ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಟ್ರಾಯ್‌ ಹೇಳುತ್ತದೆ. ವಾಸ್ತವವಾಗಿ ಹೊಸ ನೀತಿಯಲ್ಲಿ ಗ್ರಾಹಕರು ಮೊದಲಿಗಿಂತ ಹೆಚ್ಚು ಪಾವತಿ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಸದ್ಯದ ಆತಂಕ.

Advertisement

ಹೊಸ ನೀತಿಗೆ ಹೊಸ ದರ ಜಾರಿ
ಟ್ರಾಯ್‌ ಹೊಸ ನೀತಿಗೆ ಅನುಗುಣವಾಗಿ ಬಹುತೇಕ ಎಲ್ಲ ಚಾನೆಲ್‌ ಮಾಲೀಕ ಸಂಸ್ಥೆಗಳು ತಮ್ಮ ಚಾನೆಲ್‌ಗ‌ಳ ದರ ಪಟ್ಟಿಯನ್ನು ಪ್ರಕಟಿಸಿವೆ. ಅಷ್ಟೇ ಅಲ್ಲ, ತಮ್ಮ ಸಂಸ್ಥೆಯ ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳಲು ಹೊಸ ಹೊಸ ಪ್ಯಾಕೇಜ್‌ಗಳನ್ನೂ ಬಿಡುಗಡೆ ಮಾಡಿವೆ. 68 ಪ್ಯಾಕ್‌ಗಳನ್ನು ಝೀ ಎಂಟರ್‌ಟೇನ್‌ಮೆಂಟ್‌ ಬಿಡುಗಡೆ ಮಾಡಿದೆ. ಹಿಂದಿ ಚಾನೆಲ್‌ಗ‌ಳ ಪ್ಯಾಕ್‌ಗೆ ಇದು 45 ರೂ. ನಿಗದಿಪಡಿಸಿದೆ. ಇನ್ನು ಸ್ಟಾರ್‌ ಇಂಡಿಯಾ ಕೂಡ ಚಾನೆಲ್‌ಗ‌ಳಿಗೆ ದರ ನಿಗದಿಪಡಿಸಿದೆ. ತನ್ನ ಹಿಂದಿ ಚಾನೆಲ್‌ಗ‌ಳ ಪ್ಯಾಕ್‌ಗೆ 49 ರೂ. ನಿಗದಿಸಿದೆ. ಇನ್ನೊಂದೆಡೆ 32 ಚಾನೆಲ್‌ಗ‌ಳನ್ನು ಹೊಂದಿರುವ ಸೋನಿ ಪಿಕ್ಚರ್‌ ನೆಟ್‌ವರ್ಕ್‌ ತನ್ನ ಎಚ್‌ಡಿ ಚಾನೆಲ್‌ಗ‌ಳ ಪ್ಯಾಕ್‌ಗೆ 90 ರೂ. ನಿಗದಿಪಡಿಸಿದೆ.

ಗ್ರಾಹಕರಿಗೆ ಅಧಿಕಾರ
ವಾಸ್ತವವಾಗಿ ಈ ವ್ಯವಸ್ಥೆಯಿಂದ ಗ್ರಾಹಕರಿಗೆ ಆಯ್ಕೆಯ ಅಧಿಕಾರ ಸಿಗುತ್ತದೆ ಎಂಬುದು ನಿಜವಾದರೂ, ಚಾನೆಲ್‌ಗ‌ಳ ಮಾಲೀಕರಿಗೆ ಹಿಂದಿಗಿಂತ ಹೆಚ್ಚಿನ ಅಧಿಕಾರವನ್ನು ಇದು ನೀಡುತ್ತದೆ. ಅಷ್ಟೇ ಅಲ್ಲ, ಇದು ಕೇಬಲ್‌, ಡಿಟಿಎಚ್‌ ಹಾಗೂ ಚಾನೆಲ್‌ ಮಾಲೀಕ ಸಂಸ್ಥೆಗಳ ಮಧ್ಯೆ ಹೊಸದೊಂದು ತಿಕ್ಕಾಟಕ್ಕೂ ನಾಂದಿ ಹಾಡಿದೆ. 

ಇತಿಹಾಸವೇ ಇದೆ!
ಚಾನೆಲ್‌ಗ‌ಳ ಮಾಲೀಕರು, ಕೇಬಲ್‌ ಹಾಗೂ ಡಿಟಿಎಚ್‌ಗಳನ್ನು ನಿಯಂತ್ರಿಸಲು ಟ್ರಾಯ್‌ ಕಾಲಕಾಲಕ್ಕೆ ಹೊಸ ಹೊಸ ಕ್ರಮಗಳನ್ನು ಜಾರಿಗೆ ತರುತ್ತಲೇ ಇದೆ. ಮೊದಲ ಬಾರಿಗೆ ಚಾನೆಲ್‌ ಹಾಗೂ ಕೇಬಲ್‌ ದರಗಳನ್ನು ನಿಯಂತ್ರಿಸಲು ಟ್ರಾಯ್‌ 2007ರಲ್ಲಿ ಇದೇ ರೀತಿಯ ಕ್ರಮವೊಂದನ್ನು ಜಾರಿಗೊಳಿಸಿತ್ತು. ಆಗ ಎಲ್ಲ ಚಾನೆಲ್‌ಗ‌ಳನ್ನೂ ಪ್ರತ್ಯೇಕವಾಗಿ ನೀಡಬೇಕು ಎಂದು ಟ್ರಾಯ್‌ ಸೂಚಿಸಿತ್ತು. ಆದರೆ ಚಾಪೆಯ ಕೆಳಗೆ ನುಸುಳಿದ ಡಿಟಿಎಚ್‌ ಆಪರೇಟರ್‌ ಹಾಗೂ ಕೇಬಲ್‌ ಮಾಲೀಕ ಸಂಸ್ಥೆಗಳು, ತಮ್ಮದೇ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದವು. ಇನ್ನೊಂದೆಡೆ ಚಾನೆಲ್‌ ದರಗಳನ್ನು ವಿಪರೀತ ಏರಿಸಿದವು. ಹೀಗಾಗಿ ಪ್ರತ್ಯೇಕ ಚಾನೆಲ್‌ಗ‌ಳನ್ನು ಜನರು ಖರೀದಿಸದಂಥ‌ ಸ್ಥಿತಿಗೆ ತಂದಿಟ್ಟವು.    2017ರಲ್ಲಿ ಇದಕ್ಕೂ ನಿಯಮ ಜಾರಿಗೆ ಬಂತು. ಚಾನೆಲ್‌ಗ‌ಳ ದರವನ್ನು ವಿಪರೀತ ಏರಿಸಬಾರದು ಎಂದು ಆದೇಶ ಜಾರಿಗೆ ಬಂತು. ಅಂದರೆ ಒಂದು ಪ್ಯಾಕ್‌ನ ದರಕ್ಕೆ ಹೋಲಿಸಿದರೆ, ಆ ಪ್ಯಾಕ್‌ನಲ್ಲಿರುವ ಪ್ರತ್ಯೇಕ ಚಾನೆಲ್‌ಗ‌ಳ ಒಟ್ಟು ಮೊತ್ತವು ಶೇ. 18ರಷ್ಟನ್ನು ಮೀರುವಂತಿಲ್ಲ ಎಂದು ನಿಗದಿಸಿತು. ಅಂದರೆ 10 ಚಾನೆಲ್‌ಗ‌ಳಿರುವ ಪ್ಯಾಕ್‌ನ ದರ 85 ರೂ. ಆಗಿದ್ದರೆ, ಆ ಪ್ಯಾಕ್‌ನಲ್ಲಿರುವ ಚಾನೆಲ್‌ಗ‌ಳ ಪ್ರತ್ಯೇಕ ದರವನ್ನು ಲೆಕ್ಕ ಹಾಕಿದರೆ 100ರೂ.ಗಿಂತ ಹೆಚ್ಚಾಗುವಂತಿಲ್ಲ. ಆದರೆ ಈ ನಿಯಮ ಕೋರ್ಟ್‌ನಲ್ಲಿ ಮಾನ್ಯತೆ ಕಳೆದುಕೊಂಡಿತು.

ಕನ್ನಡದ ವೀಕ್ಷಕರಿಗೆ ಏನು ಪರಿಣಾಮ?
ಸದ್ಯ ಬಹುತೇಕ ಎಲ್ಲ ಕೇಬಲ್‌ ಮತ್ತು ಡಿಟಿಎಚ್‌ ಕಂಪನಿಗಳ ಮಾಸಿಕ ದರ 250 ರೂ.ಗಿಂತ ಕಡಿಮೆ ಇಲ್ಲ. ಕೇಬಲ್‌ಗ‌ಳಲ್ಲಿ ಎಲ್ಲ 400ಕ್ಕೂ ಹೆಚ್ಚು ಚಾನೆಲ್‌ಗ‌ಳು ಇದೇ ದರದಲ್ಲಿ ಲಭ್ಯವಾಗುತ್ತವೆ. ಇನ್ನು ಡಿಟಿಎಚ್‌ನಲ್ಲಿ ಕನ್ನಡದ ಪ್ಯಾಕ್‌ನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ನ ಒಂದಷ್ಟು ಉಚಿತ ಚಾನೆಲ್‌ಗ‌ಳು ಹಾಗೂ ಕನ್ನಡದ ಎಲ್ಲ ಚಾನೆಲ್‌ಗ‌ಳು ಲಭ್ಯವಾಗುತ್ತಿವೆ. ಹೊಸ ನೀತಿಯ ಪ್ರಕಾರ ಬಹುತೇಕ ಪಾವತಿ ಚಾನೆಲ್‌ಗ‌ಳು ತಮ್ಮ ದರಗಳನ್ನು ಬಹಿರಂಗಗೊಳಿಸಿವೆ. ಇದನ್ನು ಲೆಕ್ಕ ಹಾಕಿದರೂ ಕನ್ನಡದ ವೀಕ್ಷಕರಿಗೆ 250 ರೂ.ಗಿಂತ ಹೆಚ್ಚು ಮೊತ್ತ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಅಂದರೆ ಟ್ರಾಯ್‌ ನಿರ್ದೇಶನದ ಪ್ರಕಾರ 130 ರೂ. ಮಾಸಿಕ ನಿಗದಿತ ಶುಲ್ಕ ಭರಿಸಬೇಕು. ಇದರಲ್ಲಿ ಕನ್ನಡದ್ದೂ ಸೇರಿದಂತೆ 100 ಉಚಿತ ಚಾನೆಲ್‌ಗ‌ಳನ್ನು ನೋಡಬಹುದು. ಸಾಮಾನ್ಯವಾಗಿ ಎಚ್‌ಡಿ ಹಾಗೂ ಎಸ್‌ಡಿ ಚಾನೆಲ್‌ಗ‌ಳಿಗೆ ಪ್ರತ್ಯೇಕ ದರವಿದ್ದು, ಯಾವುದೇ ಒಂದು ಚಾನೆಲ್‌ಗ‌ಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದರಿಂದ ಮಾಸಿಕ ಬಿಲ್‌ನಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಾಗದು.

Advertisement

ಚಾನೆಲ್‌ಗ‌ಳು                                    ದರ
ಉದಯ ನ್ಯೂಸ್‌                                0.1
ರಾಜ್‌ ಮ್ಯೂಸಿಕ್‌ ಕನ್ನಡ                       0.25
ನ್ಯೂಸ್‌ 18 ಕನ್ನಡ                             0.5
ಸ್ಟಾರ್‌ ಸುವರ್ಣ ಪ್ಲಸ್‌                          5
ಚಿಂಟು ಟಿವಿ                                      6
ಉದಯ ಕಾಮಿಡಿ                               6
ಉದಯ ಮ್ಯೂಸಿಕ್‌                             6
ಕಲರ್ಸ್‌ ಸೂಪರ್‌                               8
ಉದಯ ಮೂವೀಸ                            16
ಉದಯ ಟಿವಿ                                    17
ಕಲರ್ಸ್‌ ಕನ್ನಡ                                   19
ಸ್ಟಾರ್‌ ನ್ಪೋರ್ಟ್‌ 1 ಕನ್ನಡ                    19
ಸ್ಟಾರ್‌ ಸುವರ್ಣ                                 19
ಝೀ ಕನ್ನಡ                                        19
ಕಲರ್ಸ್‌ ಕನ್ನಡ ಎಚ್‌ಡಿ                         19
ಉದಯ ಟಿವಿ ಎಚ್‌ಡಿ                           19

ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next