ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್ ಪಿಆರ್ ಕಾಯಿದೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶುಕ್ರವಾರ ಜಿಲ್ಲಾಡಳಿತ ಭವನ ಎದುರಿಗೆ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಪರಶುರಾಮ ನೀಲನಾಕಯ ಮಾತನಾಡಿ, ತಲಾತಲಾಂತರದಿಂದ ಭಾರತದ ಭೂಮಿಯಲ್ಲಿ ನೆಲೆ ಊರಿರುವ ಬಹುಜನರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಆದಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗದವರು ಸೇರಿದಂತೆ ಈ ದೇಶದ ಮೂಲ ನಿವಾಸಿಗಳ ಹತ್ತಿರ ಸರ್ಕಾರದ ಕಾಯಿದೆ ಮೂಲಕ ಪೌರತ್ವ ಸಾಬೀತು ಪಡಿಸಲು ಅಗತ್ಯ ದಾಖಲೆಗಳಿಲ್ಲ. ಲಭ್ಯವಿರುವ ದಾಖಲೆಗಳಾದ ಆಧಾರ ಕಾರ್ಡ್, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಿಂದ ಇವರೆಲ್ಲರೂ ಭಾರತೀಯರೆಂದು ಈಗಾಗಲೇ ಸಾಬೀತಾಗಿದೆ. ಆದರೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕ ಈ ಕಾಯಿದೆ ಜಾರಿಗೆ ಮೂಲಕ ದೇಶದ ಜನರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದ ಜಿಡಿಪಿ ಸಂಪೂರ್ಣ ಕುಸಿದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿನ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ವಿದ್ಯಾವಂತ ಯುವಕರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೆಲಸಕ್ಕೆ ಬಾರದ ಜನವಿರೋಧಿ ಕಾಯಿದೆ ಜಾರಿಗೆ ಮೂಲಕ ಹಿಟ್ಲರ್ ಆಡಳಿತ ನಡೆಸುತ್ತಿದೆ ಎಂದು ದೂರಿದರು. ಭಾರತ ದೇಶ ಬಹುತ್ವದ ನೆಲೆಯ ಮೇಲೆ ನಿಂತಿರುವ ಜಾತ್ಯತೀತ ರಾಷ್ಟ್ರವಾದ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ತೆರೆಮರೆಯ ಹಿಂದೆ ನಡೆದಿದೆ. ಈ ದೇಶದ ಜನರನ್ನು ಗಣನೆಗೆ ತೆಗೆದುಕೊಂಡು ಸಂವಿಧಾನದ ಉಳಿವಿಗಾಗಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯಿದೆ ಕೂಡಲೇ ನಿಷೇಧ ಮಾಡಬೇಕು. ಈ ವಿಷಯವನ್ನು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿ ಜಾರಿ ಮಾಡಿರುವ ಕೇಂದ್ರ ಸರ್ಕಾರ, ಕೂಡಲೇ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಡಿಎಸ್‌ಎಸ್‌ನ ಜಿಲ್ಲಾ ಸಂಚಾಲಕ ಮುತ್ತಣ್ಣ ಚಲವಾದಿ, ಸಿದ್ದು ಮಾದರ, ಮೆಹಬೂಬ ಸೌದಾಗರ, ಸಲಿಂ ಶೇಖ, ಬಂದೇನವಾಜ ಸೌದಾಗರ, ನರಸಪ್ಪ ಹಿರೇಮಾನಿ, ಅಂಜು ಬಾನು, ಲವ ಹರೇಮಾನಿ, ವಿಠಲ ಮಿರ್ಜಿ, ತುಳಜರಾಮ ನೀಲನಾಯಕ, ಸುಧಾಕರ ಬೆಂಡಿಗೇರಿ, ಮಲ್ಲು ವಡಗೇರಿ, ರವಿ ಮಾಚಕನೂರ, ಆನಂದ ನೀಲನಾಯಕ, ಶಿವಾನಂದ ಗಲಗಲಿ, ರಮೇಶ ಮಾದರ, ಶಿಡ್ಲಪ್ಪ ಮಾದರ ಪಾಲ್ಗೊಂಡಿದ್ದರು.