Advertisement

ಬರಿದಾಯ್ತು ಭದ್ರೆ ಒಡಲು

04:18 PM May 01, 2018 | |

ದಾವಣಗೆರೆ: ಭದ್ರಾ ಜಲಾಶಯದ ಒಡಲು ಇದೀಗ ಬರಿದಾಗಿದೆ. ಅಚ್ಚುಕಟ್ಟು ಭಾಗದ ಜಿಲ್ಲೆಯ ರೈತರು ಆತಂಕಕ್ಕೆ ಈಡಾಗಿದ್ದಾರೆ. ಸತತ 5 ಅವಧಿಗೆ ಏನೂ ಬೆಳೆಯದೆ ಈ ಬಾರಿಯಾದರೂ ಒಂದು ಬೆಳೆ ಕೈಗೆ ಸಿಗಲಿದೆ ಎಂಬ ಭರವಸೆ ಇಟ್ಟುಕೊಂಡವರಿಗೆ ಇದೀಗ ಭದ್ರೆಯ ಒಡಲು ಖಾಲಿಯಾಗಿರುವುದು ಬರಸಿಡಿಲು ಬಡಿದಂತಾಗಿದೆ.

Advertisement

ಜಿಲ್ಲೆಯ 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಕಳೆದ ಜನವರಿ 5ರಂದು ನಾಲೆಗೆ ನೀರು ಬಿಡಲಾಯಿತು. 120 ದಿನಗಳ ಕಾಲ ಸತತ ನೀರು ಹರಿಸಲು ವೇಳಾಪಟ್ಟಿ ಸಿದ್ಧಪಡಿಸಿದ ಕಾಡಾ ರೈತರಿಗೆ ಭತ್ತ ಬೆಳೆಯಲು ಪ್ರೋತ್ಸಾಹಿಸಿತು. ಇದನ್ನು ನಂಬಿಕೊಂಡ ರೈತರು ಭತ್ತ ನಾಟಿಗೆ ಮುಂದಾದರು.

ಮೇಲ್ಭಾಗದಲ್ಲಿ ನೀರಿನ ಹರಿವು ಹೆಚ್ಚಾದ್ದರಿಂದ ಕೆಳಭಾಗಕ್ಕೆ ನೀರು ಹರಿಯುವ ಪ್ರಮಾಣ ಇಳಿಕೆಯಾಯಿತು. ಇದೇ ಕಾರಣಕ್ಕೆ ನೀರು ಬಿಟ್ಟ 20 ದಿನದ ನಂತರ ಈ ಭಾಗದಲ್ಲಿ ಭತ್ತ ನಾಟಿ ಆರಂಭ ಆಗಿತ್ತು. ನೀರು ಹರಿದು ಬಂದಂತೆ ರೈತರು ನಾಟಿ ಮಾಡಿದರು. ಜಿಲ್ಲೆಯಲ್ಲಿನ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರು ನೀರು ಹರಿದ ತಿಂಗಳ ನಂತರ ನಾಟಿ ಮಾಡಿದರು. 

ಇದೀಗ ಈ ಎಲ್ಲಾ ಭತ್ತದ ಬೆಳೆ ವಿಫಲ ಆಗುವ ಭೀತಿಯಲ್ಲಿದೆ. ಮೂರು ಹಂತದಲ್ಲಿ ಭತ್ತ ನಾಟಿ ಮಾಡಲಾಗಿದೆ. ರೈತರ ಪೈಕಿ
ಮೊದಲ ಕಂತಲ್ಲಿ ನಾಟಿ ಮಾಡಿದ ಗದ್ದೆಗಳಿಗೆ ಈಗಿನ ಲೆಕ್ಕಾಚಾರದಂತೆ ಕನಿಷ್ಠ ಇನ್ನೂ 20 ದಿನ ನೀರು ಬೇಕು. ಉಳಿದ ಭಾಗಕ್ಕೆ 1 ತಿಂಗಳಾದರೂ ನೀರು ಬೇಕಿದೆ.

ಆದರೆ, ಜಲಾಶಯದ ನೀರಿನ ಮಟ್ಟ ಇದೀಗ 115 ಅಡಿ ಎತ್ತರದ ಆಸುಪಾಸಿನಲ್ಲಿದೆ. ಹಾಗಾಗಿಯೇ ಗೇಟ್‌ ತೆರೆದಿದ್ದರೂ ಸಹ ನಾಲೆಯಲ್ಲಿ ಹರಿಯುವ ನೀರಿನ ಪ್ರಮಾಣ ಈಗಾಗಲೇ 2-3 ಅಡಿ ಇಳಿಕೆ ಕಂಡಿದೆ. ಅಲ್ಲಿಗೆ ಜಲಾಶಯದ ಮಟ್ಟ ಇದೀಗ ಬಳಕೆ ಮಾಡಲು ಬಾರದ ಮಟ್ಟಕ್ಕೆ ಬಂದು ತಲುಪಿದೆ ಎಂದು ಅಚ್ಚುಕಟ್ಟು ಭಾಗದ ತಜ್ಞ ರೈತರು ಹೇಳುತ್ತಿದ್ದಾರೆ.

Advertisement

ಜಲಾಶಯ ಒಟ್ಟು 32ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 13ಟಿಎಂಸಿ ನೀರು ಬಳಕೆಗೆ ಸಿಗುವುದಿಲ್ಲ. ಉಳಿದ ನೀರನ್ನು ಬಳಸಬಹುದು. ಆದರೆ, ಇಂದಿನ ಜಲಾಶಯದ ಮಟ್ಟ ಗಮನಿಸಿದರೆ 14 ಟಿಎಂಸಿ ಇದೆ. ಅಲ್ಲಿಗೆ ಇನ್ನೊಂದು ಟಿಎಂಸಿಯಲ್ಲಿ ಕೊನೆಭಾಗದವರೆಗೆ ನೀರು ತಲುಪುವುದು ಸಾಧ್ಯವಿಲ್ಲವಾಗಿದೆ ಎಂದು ಕಾಡಾದ ಮಾಜಿ ಸದಸ್ಯರೊಬ್ಬರು ಹೇಳುತ್ತಾರೆ.

ಈ ಎಲ್ಲಾ ಅಂಶ ಗಮನಿಸಿದರೆ ಜಿಲ್ಲೆಯ ಅಚ್ಚುಕಟ್ಟು ಭಾಗದ ರೈತರು ಇದುವರೆಗೆ ಕಳೆದುಕೊಂಡು 5 ಬೆಳೆಯ ಜೊತೆಗೆ
ಈ ಬೆಳೆ ಸಹ ಕೈಗೆ ಬಂದರೂ ಜೇಬಿಗೆ ಹಣ ತಂದುಕೊಡಲಾಗದ ಬೆಳೆ ಆಗಲಿದೆ ಎನ್ನುವಂತಾಗಿದೆ. 

ಕುಡಿಯುವ ನೀರಿಗೂ ಸಮಸ್ಯೆ?
ಸದ್ಯ ಜಲಾಶಯ ಸಂಪೂರ್ಣ ಖಾಲಿ ಆಗುವುದರಿಂದ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವುದು ಖಚಿತ. ಹಾಲಿ ಈಗಾಗಲೇ ಜಾತ್ರೆ, ಕುಡಿಯಲು ಎಂದು ನದಿಗೆ 6 ಟಿಎಂಸಿ ನೀರು ಹರಿಸಲಾಗಿದೆ. ಅದು ಈಗ ಖಾಲಿ ಸಹ ಆಗಿಹೋಗಿದೆ. ಮುಂದೆ ಕುಡಿಯುವುದಕ್ಕೂ ಜಲಾಶಯದಲ್ಲಿ ನೀರಿಲ್ಲ. ಇದು ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಯ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಲು ಕಾರಣವಾಗಲಿದೆ.

ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next