Advertisement
ಸುಂದರ ಸ್ವಚ್ಛ ಕಾರ್ಕಳ ಕಲ್ಪನೆಯಡಿ ತ್ಯಾಜ್ಯ ನಿರ್ವಹಣೆಗೆಂದು ಕಾರ್ಕಳ ಪುರಸಭೆ ವತಿಯಿಂದ ಬಂಗ್ಲೆಗುಡ್ಡೆಯ ಪರನೀರು ವಸತಿ ಪ್ರದೇಶದಲ್ಲಿ ಒಣ ಕಸ ಸಂಗ್ರಹಕ್ಕೆಂದು ಕಟ್ಟಡವೊಂದನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಅಧಿಕಾರಿ ಅವಧಿಯಲ್ಲಿ ನಿರ್ಮಾಣವಾಗಿದ್ದ ಕಟ್ಟಡವಿದು. ಆದರೇ ಕಟ್ಟಡ ನಿರ್ಮಿಸಿದ್ದರೂ ಸ್ಥಳೀಯರ ವಿರೋಧದಿಂದ ಒಣ ಕಸ ಸಂಗ್ರಹ ಮಾತ್ರ ಕಟ್ಟಡದಲ್ಲಿ ಸಾಧ್ಯವಾಗಿಲ್ಲ. ಸಿಮೆಂಟ್ ಮೇಲ್ಛಾವಣಿಯ ಕಟ್ಟಡ ಕಳೆದ ಎಂಟು ವರ್ಷಗಳಿಂದ ನಿರ್ಮಾಣವಾಗಿ ಹಾಗೇ ಉಳಿದುಕೊಂಡಿದೆ. ಶಿಥಿಲವಾಗುತ್ತ ಬರುತ್ತಿದೆ. ಲಕ್ಷಾಂತರ ರೂ. ವೆಚ್ಚದ ಕಟ್ಟಡ ನಿರುಪಯುಕ್ತವಾಗಿದೆ.
Related Articles
Advertisement
ಸ್ಥಳೀಯ ಜನರಿಗೆ ಅನುಕೂಲವಾಗಲೆಂದು ನಿರ್ಮಿಸಿದ ಈ ಒಣ ಕಸ ಸಂಗ್ರಹ ಕಟ್ಟಡದ ಪ್ರಯೋಜನ, ಮೂಲ ಆಶಯದ ಬಗ್ಗೆ ಸ್ಥಳೀಯ ಜನತೆಗೆ ತಿಳಿಸುವ ಪ್ರಯತ್ನವನ್ನು ಪುರಸಭೆ ವತಿಯಿಂದ ಮಾಡುತ್ತ ಬರಲಾಗಿದೆ. ಸದುದ್ದೇಶದಿಂದ ನಿರ್ಮಾಣಗೊಂಡ ಕಟ್ಟಡ ಸದ್ಬಳಕೆಯಾಗುವುದಕ್ಕೆ ಸ್ಥಳೀಯರ ಸಹಕಾರ ಅಗತ್ಯ.ಒಣಕಸ ಸಂಗ್ರಹ ಕೇಂದ್ರದ ಕಾರ್ಯ ನಿರ್ವಹಣೆಗೆಂದು ಕಟ್ಟಡ ನಿರ್ಮಿಸಲಾಗಿತ್ತು. ಸ್ಥಳೀಯರು ಅಡ್ಡಿಪಡಿಸಿದ್ದ ಕಾರಣಕ್ಕೆ ಅದು ನಿಂತಿದೆ. ಈ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಿ ಮೂಲ ಆಶಯವನ್ನು ತಿಳಿಸುವ ಕಾರ್ಯ ನಡೆಸುತ್ತ ಬಂದಿದ್ದೇವೆ. ಸ್ಥಳೀಯರಿಗೆ ಮಾಹಿತಿ ನೀಡಿ, ಮನವರಿಕೆ ಮಾಡಿ, ಅವರ ಮನವೊಲಿಸಿ ಮತ್ತೆ ಒಣಕಸ ಸಂಗ್ರಹ ಕೇಂದ್ರವನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗುವುದು ಎಂದು ಪುರಸಭೆ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ತಿಳಿಸಿದ್ದಾರೆ.
ಕಟ್ಟಡ ನಿಧಾನಕ್ಕೆ ಶಿಥಿಲವಾಗುತ್ತ ಬಂದಿದೆ. 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಕಟ್ಟಡ ನಯಾ ಪೈಸೆ ಪ್ರಯೋಜನಕ್ಕೆ ಬಂದಿಲ್ಲ. ಒಣಕಸ ಸಂಗ್ರಹ ಕೇಂದ್ರಕ್ಕೆ ಪುರಸಭೆ ವತಿಯಿಂದ ಹಾಕಲಾಗಿದ್ದ ಬೀಗವನ್ನು ಯಾರೋ ಮುರಿದಿದ್ದಾರೆ. ಪರಿಸರದ ನಿವಾಸಿಗಳು ಮನೆಯ ಸಾಮಗ್ರಿಗಳನ್ನು ಅದರೊಳಗೆ ಇಡುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಕೆಲವೊಂದು ಅಕ್ರಮ ಚಟುವಟಿಕೆಗಳಿಗೂ ಕಟ್ಟಡ ಬಳಕೆಯಾಗುತ್ತಿದೆ.
ಚರ್ಚಿಸಿ ನಿರ್ಧಾರ: ಒಣ ಕಸ ಸಂಗ್ರಹ ಕೇಂದ್ರ ಬಳಕೆ ಸಾಧ್ಯವಾಗಿರಲಿಲ್ಲ. ಪುರಸಭೆಯಲ್ಲಿ ಈ ಬಗ್ಗೆ ಅನೇಕ ಬಾರಿ ಚರ್ಚೆ ನಡೆದಿದೆ. ಸ್ಥಳೀಯರಿಗೆ ಅನುಕೂಲವಾಗುವ ರೀತಿ ಕಟ್ಟಡವನ್ನು ಬಳಕೆ ಮಾಡಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. -ಪ್ರತಿಮಾ ರಾಣೆ, ಕೌನ್ಸಿಲರ್ ಪುರಸಭೆ
-ಬಾಲಕೃಷ್ಣ ಭೀಮಗುಳಿ