Advertisement

ಬೇಸಿಗೆ ಮುನ್ನವೇ ಬರಿದಾಗುತ್ತಿದೆ ಕೃಷ್ಣೆ ಒಡಲು

10:00 AM Feb 08, 2019 | |

ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನ ಬಹುತೇಕ ಹಳ್ಳಿಗಳ ಜೀವನದಿಯಾದ ಕೃಷ್ಣೆಯ ಒಡಲು ಬೇಸಿಗೆ ಮುನ್ನವೇ ಬತ್ತುತ್ತಿದೆ. ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಕಾಡುತ್ತಿದೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಸತತ ಬರ ಎದುರಿಸಿದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೃಷ್ಣಾ ಕಣಿವೆ ಪ್ರದೇಶದಲ್ಲಿ ವ್ಯಾಪಕ ಮಳೆ ಆಗಿದ್ದರಿಂದ ಆಲಮಟ್ಟಿ ಜಲಾಶಯ ಮತ್ತು ನಾರಾಯಣಪುರ ಜಲಾಶಯ ತುಂಬಿ ಕೃಷ್ಣಾ ನದಿಗೆ ನೀರು ಹರಿದಿತ್ತು. ಇದೀಗ ಬೇಸಿಗೆ ಆರಂಭಕ್ಕೂ ಮುನ್ನವೇ ಕೃಷ್ಣೆಯ ಒಡಲು ಬತ್ತುತ್ತಿದೆ. ಕೃಷ್ಣಾ ನದಿಯಲ್ಲಿ ಹಗಲು ರಾತ್ರಿ ಎನ್ನದೇ ಅಕ್ರಮ ಮರಳು ಸಾಗಣೆ ಮಾಡಿದ್ದೂ ಕೂಡ ನದಿಯಲ್ಲಿ ನೀರಿಲ್ಲದಂತಾಗಲು ಕಾರಣವಾಗುತ್ತಿದೆ. ಕುಡಿಯುವ ನೀರಿಗಾಗಿ ಕೃಷ್ಣೆಯನ್ನೇ ನೆಚ್ಚಿಕೊಂಡ ನದಿ ದಡದ ಗ್ರಾಮಗಳು ಮತ್ತು ದೇವದುರ್ಗ ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇನ್ನು ಬೇಸಿಗೆಯ ನಾಲ್ಕು ತಿಂಗಳನ್ನು ಹೇಗೆ ಕಳೆಯುವುದೆಂಬ ಆತಂಕ ಗ್ರಾಮಸ್ಥರು ಹಾಗೂ ಪಟ್ಟಣದ ನಿವಾಸಿಗಳನ್ನು ಕಾಡುತ್ತಿದೆ.

ಎರಡು ದಿನಕ್ಕೊಮ್ಮೆ ನೀರು: ತಾಲೂಕಿನ ಹೂವಿನಹೆಡಗಿ ಗ್ರಾಮದ ಬಳಿ ಹರಿದಿರುವ ಕೃಷ್ಣಾ ನದಿ ಬರಿದಾಗಿದೆ. ಅಲ್ಲಲ್ಲಿ ತಗ್ಗುಗಳಲ್ಲಿ ಅಲ್ಪಸ್ವಲ್ಫ ನೀರು ನಿಂತಿದ್ದು ಬಿಟ್ಟರೆ ನದಿ ಬಯಲಿನಂತೆ ಕಾಣುತ್ತಿದೆ. ಕೃಷ್ಣಾ ನದಿಯಿಂದ ನೀರು ಎತ್ತುವಳಿ ಮಾಡಿ ಗೂಗಲ್‌ ಗ್ರಾಮದಲ್ಲಿ ಸಂಗ್ರಹಿಸಿ ದೇವದುರ್ಗ ಪಟ್ಟಣದ 23 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ನದಿ ಬತ್ತಿದ್ದರಿಂದ ಪುರಸಭೆ ಅಧಿಕಾರಿಗಳು ಎರಡು ದಿನಕ್ಕೊಮ್ಮೆ ಪಟ್ಟಣಕ್ಕೆ ನೀರು ಪೂರೈಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜೀವ ಗಾಂಧಿ ಟೆಕ್ನಾಲಜಿ ಯೋಜನೆಯಡಿ ಚಿಕ್ಕಬೂದೂರು, ಸಲಿಕ್ಯಾಪುರು, ಜೇರಬಂಡಿ ಗ್ರಾಮಗಳಿಗೆ ನದಿ ನೀರು ಪೂರೈಸುವ ಯೋಜನೆ ಹಳ್ಳ ಹಿಡಿದಿದೆ. ಹೀಗಾಗಿ ಗ್ರಾಮಸ್ಥರು ಪ್ರತಿವರ್ಷ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ತಪ್ಪುತ್ತಿಲ್ಲ. ಈಗಾಗಲೇ ನೀರಿನ ಸಮಸ್ಯೆ ತೀವ್ರಗೊಂಡಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಾರದ ಹಿಂದೆ ಗ್ರಾಮಸ್ಥರು ತಹಶೀಲ್ದಾರ್‌ ಕಚೇರಿ ಎದುರು ಹೋರಾಟ ನಡೆಸಿದ್ದರು. ಆದರೆ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಪೂರೈಕೆಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥ ಸಂಗಮೇಶ ಆರೋಪಿಸಿದ್ದಾರೆ.

ಕೊಳವೆಬಾವಿಗಳಲ್ಲೂ ನೀರಿಲ್ಲ: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕೈಪಂಪ್‌, ಕೊಳವೆಬಾವಿಗಳಿವೆ. ಆದರೆ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ. ದುರಸ್ತಿಗೀಡಾದ ಕೊಳವೆಬಾವಿಗಳ ದುರಸ್ತಿಗೆ ಪುರಸಭೆ ಮುಂದಾಗುತ್ತಿಲ್ಲ. ಪುರಸಭೆ ಈಗಲೇ ಎಚ್ಚೆತ್ತುಕೊಂಡು ಕೊಳವೆಬಾವಿಗಳ ದುರಸ್ತಿಗೆ ಮುಂದಾಗದಿದ್ದರೆ ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ಕರವೇ ಮುಖಂಡ ಎಚ್. ಶಿವರಾಜ.

Advertisement

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಗಮನಹರಿಸಬೇಕು. ನೀರು ಪೂರೈಕೆಯಲ್ಲಿ ವ್ಯತ್ಯಯವಾದರೆ ಟ್ಯಾಂಕರ್‌ ಮೂಲಕ ವಾರ್ಡ್‌ಗಳಿಗೆ ನೀರು ಒದಗಿಸಬೇಕು.
•ಚಂದ್ರಶೇಖರ ಕುಂಬಾರ, ಪುರಸಭೆ ಸದಸ್ಯ

ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆ ಆಗಿದೆ. ದೊಡ್ಡಿಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಹಾಗೂ 23 ವಾರ್ಡ್‌ಗಳಲ್ಲಿ ಬೇಸಿಗೆಯಲ್ಲಿ ಸಮರ್ಪಕ ನೀರು ಪೂರೈಕೆಗೆ ಅಧಿಕಾರಿಗಳು ಗಮನಹರಿಸಬೇಕು.
•ಜಿ.ಪಂಪಣ್ಣ ಪುರಸಭೆ ಸದಸ್ಯ

ಕೃಷ್ಣಾ ನದಿಯಲ್ಲಿ ತಗ್ಗು ತೋಡಿ ನೀರು ಸಂಗ್ರಹಿಸಿ ಎತ್ತುವಳಿ ಮಾಡಿ ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು 30 ಲಕ್ಷ ಅನುದಾನ ಬಿಡುಗಡೆಯಾಗಿದೆ. ವೀರಘೋಟ ಗ್ರಾಮದಲ್ಲಿ ಇಷ್ಟಲಿಂಗ ಕಾರ್ಯಕ್ರಮ ಇರುವುದರಿಂದ ಕೃಷ್ಣಾ ನದಿಗೆ ನೀರು ಬಿಡುತ್ತಾರೆಂಬ ಮಾಹಿತಿ ಇದೆ. ಇದರಿಂದ ಸ್ವಲ್ಪ ಅನುಕೂಲವಾಗಲಿದೆ.
•ತಿಮ್ಮಪ್ಪ ಜಗಲಿ, ಪುರಸಭೆ ಮುಖ್ಯಾಧಿಕಾರಿ.

•ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next