ಬಾಗಲಕೋಟೆ: ಐತಿಹಾಸಿಕ ಮುಚಖಂಡಿ ಸುಕ್ಷೇತ್ರ ವೀರಭದ್ರೇಶ್ವರ ದೇವಸ್ಥಾನ ಆವರಣಕ್ಕೆ ಹೊಂದಿಕೊಂಡಿರುವ ಬ್ರಿಟಿಷ್ ಕಾಲದ ಮುಚಖಂಡಿ ಕೆರೆಯು ಮದ್ಯವ್ಯಸನಿಗಳ ತಾಣವಾಗುತ್ತಿದೆ.
ಮುಚಖಂಡಿ ದೇವಸ್ಥಾನ ಮುಂದೆ ಹಾಯ್ದು ಹೋಗುವ ಬಾದಾಮಿ ರಸ್ತೆಯ ಪಕ್ಕದಲ್ಲಿರುವ ಅಯ್ಯಪ್ಪನ ದೇವಸ್ಥಾನ ಆವರಣ ಹಾಗೂ ತಾಂಡಾದ ದುರ್ಗಾದೇವಿ ಪಕ್ಕದಲ್ಲಿ ಹಾಯ್ದು ಹೋಗುವ ರಸ್ತೆಯಲ್ಲಿ ಕುಡುಕರು ಕುಡಿದು ರಸ್ತೆ ಪಕ್ಕದಲ್ಲೇ ಮದ್ಯ ಹಾಗೂ ಬಿಯರ್ ಬಾಟಲ್‌ಗಳನ್ನು ಬಿಸಾಕಿರುವುದು ಕಂಡು ಬರುತ್ತಿದೆ.ಮುಚಖಂಡಿ ಕೆರೆಗೆ ಆಲಮಟ್ಟಿ ಹಿನ್ನೀರನ್ನು ಪೈಪ್‌ಗ್ಳ ಮುಖಾಂತರ ನೀರು ಬಿಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮುಚಖಂಡಿ ಕೆರೆ ವೀಕ್ಷಣೆಗೆ ಮತ್ತು ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಜೆ ಹೆಚ್ಚು ಜನ ಬರುವುದರಿಂದ ರಸ್ತೆ ಪಕ್ಕದಲ್ಲೇ ಕುಡುಕರು ಕುಳಿತು ಕುಡಿಯುವುದರಿಂದ ಸಾರ್ವಜನಿಕರು ಮುಜುಗರಕ್ಕೊಳಗಾಗುತ್ತಿದ್ದಾರೆ. ಅಲ್ಲದೇ ರಸ್ತೆ ಪಕ್ಕದಲ್ಲೇ ಕುಡಿದಿರುವ ಬಾಟಲ್ ಗಳನ್ನು, ಸೇದಿದ ಸಿಗರೇಟ್ ತುಂಡುಗಳನ್ನು ಎಸೆದು ಹೋಗುತ್ತಾರೆ.
ಮುಚಖಂಡಿ ದೇವಸ್ಥಾನ ಆವರಣ ಮತ್ತು ರಸ್ತೆ ಪಕ್ಕದಲ್ಲಿಯೇ ಕುಳಿತು ಕುಡಿಯುವುದರಿಂದ ಈ ರಸ್ತೆ ಮಾರ್ಗವಾಗಿ ಹೋಗುವ ಪ್ರಯಾಣಿಕರಿಗೂ ತೀವ್ರ ಮುಜುಗರವಾಗಿದೆ. ರಾತ್ರಿ 8 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಇದು ಕುಡುಕರ ಸಾಮ್ರಾಜ್ಯವಾಗಿ ಪರಿವರ್ತನೆಯಾಗಿರುತ್ತದೆ. ರಾತ್ರಿ ಸಮಯದಲ್ಲಿ ಈ ರಸ್ತೆಯ ಮೂಲಕ ಹಾಯ್ದು ಹೋಗುವ ಸವಾರರು, ಪ್ರಯಾಣಿಕರು ಕುಡುಕರ ದರ್ಶನ ಪಡೆದುಕೊಂಡೇ ಮನೆಗಳಿಗೆ ತೆರಳುವಂತಾಗಿದೆ. ಈ ಮಾರ್ಗವಾಗಿ ಮಹಿಳೆಯರು, ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಓಡಾಡುತ್ತಿರುವುದರಿಂದ ಈ ಸನ್ನಿವೇಶಗಳನ್ನು ನೋಡಿಕೊಂಡೇ ಹೋಗಬೇಕು.
ಮುಚಖಂಡಿ ದೇವಸ್ಥಾನ ಆವರಣ ಮತ್ತು ಬಾದಾಮಿ ಬೈಪಾಸ್ ರಸ್ತೆ ಪಕ್ಕ ಕುಳಿತು ಮದ್ಯ ಸೇವಿಸುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು. ಇಂದಿನಿಂದ ಗಸ್ತು ನಿಯೋಜಿಸಲಾಗುವುದು.
-ಪ್ರಭಾಕರ ಧರ್ಮಟ್ಟಿ, ಸಿಪಿಐ, ಗ್ರಾಮೀಣ ಠಾಣೆ.
-ವಿಠ್ಠಲ ಮೂಲಿಮನಿ