ಮಧ್ಯಪ್ರದೇಶ: ದೇಶಾದ್ಯಂತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸರ್ಕಾರ ಏನೇನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೆ ಇಲ್ಲೊಬ್ಬರು ಶಿಕ್ಷಕರು ವಿದ್ಯಾರ್ಥಿಗಳ ಎದುರೇ ಕುಡಿದು ಬಂದು ಶಾಲೆಯಲ್ಲೇ ತೂರಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಬಿಯೋಹರಿ ಬ್ಲಾಕ್‌ನಲ್ಲಿರುವ ಸರಕಾರಿ ಶಾಲೆಯ ಶಿಕ್ಷರಾಗಿರುವ ಉದಯಭಾನ್ ಸಿಂಗ್ ನ್ಯಾಟ್ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುವ ಬದಲು ಪಾಠದ ಸಮಯದಲ್ಲಿ ಕುಡಿದು ತೂರಾಡುತ್ತಿರುತ್ತಾರೆ, ಇದರಿಂದ ಮಕ್ಕಳು ಪಾಠದಿಂದ ವಂಚಿತರಾಗುತ್ತಿದ್ದಾರೆ, ಇತ್ತ ಮಕ್ಕಳ ಭವಿಷ್ಯ ನೆನಪಿಸಿಕೊಂಡು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ದಿನಂಪ್ರತಿ ಈ ಶಿಕ್ಷಕನ ಇದೇ ಗೋಳು ಎನ್ನುತ್ತಾರೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು, ಕೆಲ ಸಮಯದ ಹಿಂದೆಯಷ್ಟೇ ಈ ಶಿಕ್ಷಕ ವರ್ಗಾವಣೆಗೊಂಡು ಈ ಶಾಲೆಗೆ ನೇಮಕಗೊಂಡಿದ್ದಾರೆ ಅಂದಿನಿಂದ ಶಿಕ್ಷಕ ದಿನಂಪ್ರತಿ ಕುಡಿದು ಬಂದು ವಿಚಿತ್ರವಾಗಿ ವರ್ತಿಸುತ್ತಿರುವುದಾಗಿ ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಈ ನಡುವೆ ಹಲವು ಬಾರಿ ಪೋಷಕರು ಶಿಕ್ಷಕರ ಬಳಿ ಮಾತನಾಡಿ ಮನವೊಲಿಸುವ ಯತ್ನವನ್ನೂ ಮಾಡಿದ್ದಾರೆ ಆದರೆ ಇದು ಯಾವುದೂ ಪ್ರಯೋಜನವಾಗಲಿಲ್ಲ ಅಲ್ಲದೆ ಶಿಕ್ಷಣ ಇಲಾಖೆಗೂ ಈ ಮೊದಲು ಪೋಷಕರು ದೂರು ನೀಡಿದ್ದಾರೆ ಆದರೆ ಇಲಾಖೆ ಕೂಡ ಯಾವುದೇ ಕ್ರಮ ಕೈಗೊಳ್ಳದ ನಿಟ್ಟಿನಲ್ಲಿ ಬೇಸರಗೊಂಡ ಪೋಷಕರು ಕೊನೆಗೆ ಶಿಕ್ಷಕ ಶಾಲೆಯಲ್ಲಿ ಕುಡಿದು ತೂರಾಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ ಈ ಮೂಲಕವಾದರೂ ಶಿಕ್ಷಕನ ಅಸಲೀಯತ್ತು ಶಿಕ್ಷಣ ಇಲಾಖೆಗೆ ಗೊತ್ತಾಗಲಿ ತಪ್ಪಿತಸ್ಥ ಶಿಕ್ಷಕನ ಮೇಲೆ ಕ್ರಮ ಜರುಗಿಸಲಿ ಎಂದು ಹೇಳಿಕೊಂಡಿದ್ದಾರೆ.
ಇತ್ತ ಶಿಕ್ಷಕ ಕುಡಿದ ಮತ್ತಿನಲ್ಲಿ ತೂರಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬೆನ್ನಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದು ಜೊತೆಗೆ ಶಿಕ್ಷಣ ವಿರುದ್ಧ ತನಿಖೆ ನಡೆಸುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Paris Olympics; ನೇರ ಸೆಟ್ ಗಳಿಂದ ಗೆದ್ದರೂ ಲಕ್ಷ್ಯ ಸೇನ್ ಫಲಿತಾಂಶವೇ ರದ್ದು! ಆಗಿದ್ದೇನು?