ಬೆಂಗಳೂರು: ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ ಜತೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿಯ ನವೀನ್ ಕುಮಾರ್, ಆದೇಶ್, ಅಬ್ದುಲ್, ಕಿರಣ್ ಬಂಧಿತರು.
ಶನಿವಾರ ಮಧ್ಯರಾತ್ರಿ 12 ಗಂಟೆಗೆ ಹೆಬ್ಟಾಳ ಸಂಚಾರ ಠಾಣೆ ಪೊಲೀಸರು ಹೆಬ್ಟಾಳದ ಸರ್ಕಲ್‌ನ ರಿಂಗ್ ರಸ್ತೆ ಬಳಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಪೊಲೀಸರ ಜತೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಂಚಾರ ಪೊಲೀಸರು ಡ್ರಂಕ್ ಡ್ರೈವ್ ತಪಾಸಣೆ ಮಾಡುವಾಗ ಕಾರೊಂದು ಬಂದಿದೆ. ಈ ವೇಳೆ ಕಾರು ಚಾಲಕ ನವೀನ್‌ನನ್ನು ಆಲ್ಕೋ ಮೀಟರ್‌ನಲ್ಲಿ ತಪಾಸಣೆ ಮಾಡಿದಾಗ ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ.
ಈ ವೇಳೆ ಕಾರಿನಲ್ಲಿ ಕುಳಿತಿದ್ದ ಇತರೆ ಮೂವರು ಆರೋಪಿಗಳು ಸಂಚಾರ ಪೊಲೀಸರ ಜತೆಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಮದ್ಯದ ಅಮಲಿನಲ್ಲಿ ಪೊಲೀಸರನ್ನು ಅವಾಚ್ಯಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಸಂಚಾರ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.