ಬೆಂಗಳೂರು: ಮದ್ಯದ ಅಮಲಿನಲ್ಲಿ ಸೈರನ್ ಮೊಳಗಿಸಿಕೊಂಡು ಅಡ್ಡಾ ದಿಡ್ಡಿಯಾಗಿ ಆ್ಯಂಬುಲೆನ್ಸ್ ಚಾಲನೆ ಮಾಡಿದ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸಂದೀಪ್ ಪಾಟೀಲ್ (26)ನನ್ನು ಬಂಧಿಸಿ, ಮಹಾರಾಷ್ಟ್ರ ಸಾರಿಗೆ ಇಲಾಖೆ ನೋಂದಣಿಯ ಆ್ಯಂಬುಲೆನ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಡಿವಾಳ ಸಂಚಾರ ಪೊಲೀಸರು ಹೇಳಿದರು.
ಆರೋಪಿ ಮೇ 16ರಂದು ರಾತ್ರಿ 9.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಮಡಿವಾಳ ಕಡೆಗೆ ಸೈರನ್ ಮೊಳಗಿಸಿಕೊಂಡು ಆಂಬುಲೆನ್ಸ್‌ನಲ್ಲಿ ನಗರಕ್ಕೆ ಆಗಮಿಸುತ್ತಿದ್ದ. ಅಡ್ಡಾದಿಡ್ಡಿ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕೆಲ ಸಾರ್ವಜನಿಕರು, ಆ್ಯಂಬುಲೆನ್ಸ್ ಬೆನ್ನಟ್ಟಿ ಬೊಮ್ಮನಹಳ್ಳಿ ಸಿಗ್ನಲ್ ಬಳಿ ನಿಲ್ಲಿಸಿ, ಮಡಿವಾಳ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಆರೋಪಿಯನ್ನು ತಪಾಸಣೆ ನಡೆಸಿದಾಗ ಮದ್ಯ ಸೇವನೆ ಮಾಡಿರುವುದು ದೃಢವಾಗಿದೆ. ಈ ವೇಳೆ ಆರೋಪಿ ಸಂಚಾರ ಪೊಲೀಸರ ಜತೆ ವಾಗ್ವಾದ ನಡೆಸಿದ್ದು, ಕರ್ತವ್ಯಕ್ಕೂ ಅಡ್ಡಿ ಪಡಿಸಿದ್ದಾನೆ.
ನಂತರ ಆರೋಪಿಯನ್ನು ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗಿದೆ. ಆ್ಯಂಬುಲೆನ್ಸ್ ಜಪ್ತಿ ಮಾಡಿ, ಅದರ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮಡಿವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.