ಮಂಗಳೂರು: ಒಂದು ವರ್ಷ ಹಿಂದಿನ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಇಬ್ಬರಿಗೆ ತಲಾ 5 ವರ್ಷ ಕಠಿನ ಸಜೆ ಮತ್ತು ತಲಾ 1 ಲ. ರೂ. ದಂಡ ವಿಧಿಸಿದೆ.
ಬೆಳ್ತಂಗಡಿ ತಾಲೂಕಿನ ಕಾಜೂರು ಗ್ರಾಮದ ನಿವಾಸಿ ಮಹಮ್ಮದ್ ತೌಸಿಕ್ (22) ಮತ್ತು ಮಲವಂತಿಗೆ ಗ್ರಾಮದ ಅಬ್ದುಲ್ ಸಿನಾನ್ (24) ಶಿಕ್ಷೆಗೊಳಗಾದವರು.
ಅವರನ್ನು 2018 ಎ. 13ರಂದು ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಉಜಿರೆಯಲ್ಲಿ ಬೆಳ್ತಂಗಡಿ ಸಿಐ ಗಿರೀಶ್ ಕುಮಾರ್ ಮತ್ತು ಸಿಬಂದಿ ಬಂಧಿಸಿದ್ದರು. ಬಂಧಿತರಿಂದ 1 ಲ. ರೂ. ಮೌಲ್ಯದ 5.250 ಕೆ.ಜಿ. ಗಾಂಜಾ, ಒಂದು ಕಾರು, 1,500 ರೂ. ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿ ಕೊಳ್ಳಲಾಗಿತ್ತು.
ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಡೂರು ಸತ್ಯನಾರಾಯಣಾಚಾರ್ಯ ಅವರು ಆರೋಪಿಗಳು ತಪ್ಪಿತಸ್ಥರು ಎಂದು ಮಂಗಳವಾರ ಘೋಷಿಸಿದ್ದು, ಬುಧವಾರ ಶಿಕ್ಷೆಯನ್ನು ಪ್ರಕಟಿಸಿದರು. ದಂಡ ತೆರಲು ತಪ್ಪಿದರೆ ಮತ್ತೆ ಹೆಚ್ಚುವರಿಯಾಗಿ 6 ತಿಂಗಳ ಸಾಮಾನ್ಯ ಸಜೆ ಅನುಭವಿಸಬೇಕಾಗಿದೆ.
ತಪ್ಪಿತಸ್ಥರು ಈಗಾಗಲೇ ಅನುಭವಿಸಿದ ನ್ಯಾಯಾಂಗ ಬಂಧನದ ಅವಧಿಯನ್ನು ಶಿಕ್ಷೆಯಿಂದ ಕಡಿತಗೊಳಿಸಲು ಅವಕಾಶ ನೀಡಲಾ ಗಿದೆ. ಆರೋಪಿಗಳಿಂದ ವಶಪಡಿಸಿ ಕೊಂಡಿದ್ದ ಕಾರು, ಮೊಬೈಲ್ ಫೋನ್‌ಗಳು ಮತ್ತು ನಗದನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುವುದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಪುಷ್ಪರಾಜ್ ಅಡ್ಯಂತಾಯ ಮತ್ತು ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.