Advertisement

ಡ್ರಗ್ಸ್‌ ದಂಧೆಯ ಸುತ್ತ ಮಾದಕ ಜಾಲ ಅಂತ್ಯವಾಗಲಿ

01:11 AM Sep 08, 2020 | Hari Prasad |

ಕಳೆದ ಕೆಲವು ದಿನಗಳಿಂದ ರಾಜ್ಯದ ಚಿತ್ರರಂಗ ಋಣಾತ್ಮಕ ಕಾರಣದಿಂದಾಗಿ ಸುದ್ದಿಯಲ್ಲಿದೆ.

Advertisement

ಡ್ರಗ್ಸ್‌ ದಂಧೆಯ ವಿಚಾರದಲ್ಲಿ ಇತ್ತೀಚೆಗೆ ಹೊರಬರುತ್ತಿರುವ ಚಿತ್ರರಂಗದ ಕೆಲವು ಹೆಸರುಗಳು, ತನಿಖೆ ಪಡೆಯುತ್ತಿರುವ ತಿರುವುಗಳನ್ನು ನೋಡಿದರೆ ಸ್ಯಾಂಡಲ್‌ ವುಡ್‌ನಲ್ಲಿ ಡ್ರಗ್ಸ್‌ ಜಾಲ ಬಲವಾಗಿ ಬೇರೂರಿದೆಯೇ ಎನ್ನುವ ಅನುಮಾನ ಬರಲಾರಂಭಿಸಿದೆ.

ಈ ನಿಟ್ಟಿನಲ್ಲಿ ಸ್ಯಾಂಡಲ್‌ ವುಡ್‌ ನಟಿ, ರಾಜಕಾರಣಿಯೊಬ್ಬರ ಮಗ, ಉದ್ಯಮಿಗಳು ಸೇರಿದಂತೆ ಅನೇಕರನ್ನು ಬಂಧನಕ್ಕೆ ಒಳಪಡಿಸಿ ತನಿಖೆ ನಡೆಸಲಾಗುತ್ತಿದೆ.

ಅತ್ತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವಿನಲ್ಲೂ ಮಾದಕ ಜಾಲದ ಪಾತ್ರವಿದೆಯೇ ಎನ್ನುವ ಕುರಿತೂ ತನಿಖೆ ವೇಗ ಪಡೆದಿದ್ದು, ದೇಶಾದ್ಯಂತ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಒಂದು ಕಾಲಕ್ಕೆ ದೇಶಾದ್ಯಂತ ಡ್ರಗ್ಸ್‌ ಜಾಲವು ಭೂಗತ ಲೋಕದ ಹಿಡಿತದಲ್ಲಿತ್ತು. ಈಗ ಭೂಗತ ಪಾತಕಿಗಳ ಹಾವಳಿ ಕಡಿಮೆಯಾಗಿದೆಯಾದರೂ, ಡ್ರಗ್ಸ್‌ ಜಾಲ ಮಾತ್ರ ಮೊದಲಿಗಿಂತಲೂ ಬಲಿಷ್ಠವಾಗಿಬಿಟ್ಟಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿನ ಎನ್‌ಸಿಬಿಯ ಕಾರ್ಯಾಚರಣೆಗಳಿಂದ ಸ್ಪಷ್ಟವಾಗುತ್ತಿದೆ.

Advertisement

ಕೇವಲ ಚಿತ್ರರಂಗವೆಂದಷ್ಟೇ ಅಲ್ಲ, ಹಣ ಹರಿದಾಡುವಲ್ಲೆಲ್ಲ ಡ್ರಗ್ಸ್‌ ಹಾವಳಿ ಅಧಿಕವಿದೆ ಎನ್ನುತ್ತಾರೆ ಅಧಿಕಾರಿಗಳು. ಅದರಲ್ಲೂ ಮಹಾನಗರಿಗಳಲ್ಲಂತೂ ಕೊಕೇನ್‌, ಗಾಂಜಾ, ಚರಸ್‌, ಹೆರಾಯಿನ್‌, ಮಾರ್ಫೀನ್‌, ಕೆಟಮೀನ್‌, ಎಲ್‌ಎಸ್‌ಡಿಯ ದಾಸ್ಯಕ್ಕೆ ಸಿಲುಕುವವರ ಸಂಖ್ಯೆ ವೃದ್ಧಿಸುತ್ತಲೇ ಇದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಕೊಕೇನ್‌ ಬಳಕೆ ದುಪ್ಪಟ್ಟಾಗಿದೆ ಎನ್ನುತ್ತಾರೆ ಗೃಹ ಸಚಿವಾಲಯದ ಅಧಿಕಾರಿಗಳು. ಆತಂಕದ ಸಂಗತಿಯೆಂದರೆ, ದಕ್ಷಿಣ ಏಷ್ಯನ್‌ ರಾಷ್ಟ್ರಗಳಿಗೆ ಬೆಂಗಳೂರೇ ಮುಖ್ಯ ಡ್ರಗ್ಸ್‌ ಸಾಗಣೆಯ ಮಾರ್ಗವಾಗಿ ಬದಲಾಗುತ್ತಿದೆ ಎನ್ನುವ ವಿಚಾರ.

ಒಂದು ಸಮಯದಲ್ಲಿ ರೇವ್‌ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾದಕ ದ್ರವ್ಯಗಳು, ಈಗ ಪಬ್‌ಗಳಲ್ಲಿ, ಹಲವಾರು ಪಾರ್ಟಿಗಳಲ್ಲಿ, ರಾಜ್ಯದ ಹಲವು ರೆಸಾರ್ಟುಗಳು, ಹೋಂ ಸ್ಟೇಗಳಲ್ಲೂ ಹರಿದಾಡುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಕೊಕೇನ್‌, ಗಾಂಜಾ ಸೇರಿದಂತೆ ವಿವಿಧ ಮಾದಕ ಪದಾರ್ಥಗಳು ಕಾಲೇಜು ವಿದ್ಯಾರ್ಥಿಗಳ ಕೈ ಸೇರುತ್ತಿರುವ ಅನುಮಾನವಿದೆ.

ಶಾಲಾ-ಕಾಲೇಜು ಆವರಣದಲ್ಲಿ ಐಸ್‌ ಕ್ರೀಂನಲ್ಲಿ ಡ್ರಗ್ಸ್‌ ಸವರಿ ನೀಡುತ್ತಿರುವ ಗುಮಾನಿಯಿದೆ, ಅಂಥ ದಂಧೆಕೋರರನ್ನು ಹಿಡಿಯಲಾಗುವುದು ಎಂದು ಸಚಿವ ಸುರೇಶ್‌ ಕುಮಾರ್‌ ಎಚ್ಚರಿಸಿರುವುದು ಈ ಹಿನ್ನೆಲೆಯಲ್ಲಿಯೇ. ಇವನ್ನೆಲ್ಲ ಗಮನಿಸಿದಾಗ ರಾಜ್ಯದಲ್ಲಿ ಡ್ರಗ್‌ ಪೆಡ್ಲರ್‌ಗಳ ಬೃಹತ್‌ ಜಾಲವೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ನಿರ್ವಿವಾದ.

ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ದಂಧೆ ಪ್ರಕರಣದಲ್ಲಿ ಪುನರಾವರ್ತಿತ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗ ಮಾಡಲು ಸೂಚನೆ ನೀಡಿರುವುದಾಗಿ ಗೃಹ ಸಚಿವ ಬೊಮ್ಮಾಯಿ ಹೇಳಿರುವುದು ಸ್ವಾಗತಾರ್ಹ. ಒಟ್ಟಿrನಲ್ಲಿ ಡ್ರಗ್ಸ್‌ ಜಾಲದ ಬೆನ್ನೆಲುಬನ್ನು ಮುರಿಯುವಲ್ಲಿ ಆಡಳಿತ ವ್ಯವಸ್ಥೆ ಸಫ‌ಲವಾದರೆ, ರಾಜ್ಯವು ಸ್ವಸ್ಥವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next