Advertisement

ಡ್ರಗ್ಸ್‌ ಕಾರ್ಯಾಚರಣೆ: ಮೂವರು ಆರೋಪಿಗಳು ಸಿಸಿಬಿ ವಶಕ್ಕೆ

01:26 AM Oct 02, 2020 | mahesh |

ಮಂಗಳೂರು: ಡ್ರಗ್ಸ್‌ ಜಾಲವನ್ನು ಭೇದಿಸಲು ಕಾರ್ಯಾಚರಣೆಯನ್ನು ಮುಂದುವರಿಸಿ ರುವ ಮಂಗಳೂರು ಸಿಸಿಬಿ ಪೊಲೀಸರು ನೈಜೀರಿಯಾದ ಘಾನಾ ಪ್ರಜೆ ಸಹಿತ ಪ್ರಮುಖ ಮೂವರು ಆರೋಪಿಗಳನ್ನು ಬೆಂಗಳೂರು ಹಾಗೂ ಮುಂಬಯಿಯಿಂದ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತನ್ಮಧ್ಯೆ ಸಿಸಿಬಿ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌ ಅವರನ್ನು ವರ್ಗಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಘಾನಾ ರಾಜ್ಯದ ಕುಮಾಸ್‌ ನಿವಾಸಿ ಫ್ರ್ಯಾಂಕ್‌ ಸಂಡೇ ಇಬೆಬುಚಿ (33), ಮಂಗಳೂರಿನ ಕೂಳೂರು ಗುಡ್ಡೆಯಂಗಡಿಯ ಶಮೀನ್‌ ಫೆರ್ನಾಂಡಿಸ್‌ ಯಾನೆ ಸ್ಯಾಮ್‌ (28) ಮತ್ತು ತೊಕ್ಕೊಟು ಹಿದಾಯತ್‌ ನಗರದ ನಿವಾಸಿ ಶಾನ್‌ ನವಾಸ್‌ (34) ಪೊಲೀಸರ ವಶದಲ್ಲಿದ್ದಾರೆ.

ಬೆಂಗಳೂರಿನ ಕಟ್ಟಿಗೆನಹಳ್ಳಿಯಲ್ಲಿ ಸುಮಾರು 2 ವರ್ಷಗಳಿಂದ ವಾಸ್ತವ್ಯ ಮಾಡುತ್ತಿದ್ದ ಫ್ರಾಂಕ್‌ ಸಂಡೇ ಇಬೆಬುಚಿ ವಿರುದ್ಧ ಈ ಹಿಂದೆ ಎಂಡಿಎಂಎ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಮೂವರು ಮಂಗಳೂರಿನಲ್ಲಿ ಈಗಾಗಲೇ ದಸ್ತಗಿರಿಯಾದ ಆರೋಪಿಗಳಾದ ಕಿಶೋರ್‌ ಅಮನ್‌ ಶೆಟ್ಟಿ, ಅಖೀಲ್‌ ನೌಶೀಲ್‌ ಮತ್ತು ಮೊಹಮ್ಮದ್‌ ಶಾಕೀರ್‌ ಅವರಿಗೆ ನಿಷೇ ಧಿತ ಮಾದಕ ವಸ್ತುವಾದ ಎಂಡಿಎಂಎ ಮತ್ತು ಎಂಡಿಎಂಎ ಫಿಲ್ಸ್‌ ಗಳನ್ನು ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

ಚರ್ಚೆಗೆ ಗ್ರಾಸವಾದ ಪಿಐ ವರ್ಗಾವಣೆ
ಈತನ್ಮಧ್ಯೆ ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್‌ ಆಗಿದ್ದ ಶಿವ ಪ್ರಕಾಶ್‌ ನಾಯಕ್‌ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಅವರಿಂದ ತೆರವಾದ ಸ್ಥಾನಕ್ಕೆ ಕಾಪು ಇನ್‌ಸ್ಪೆಕ್ಟರ್‌ ಆಗಿದ್ದ ಮಹೇಶ್‌ ಪ್ರಸಾದ್‌ ಅವರನ್ನು ನಿಯೋಜನೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement

ಶಿವ ಪ್ರಕಾಶ್‌ ನಾಯಕ್‌ ಸಿಸಿಬಿಯಲ್ಲಿ ಕೆಲವು ಸಮಯದಿಂದ ಇದ್ದು, ಈ ಹಿಂದೆ ಒಂದು ಬಾರಿ ವರ್ಗಾವಣೆಗೆ ಪ್ರಯತ್ನ ನಡೆದಿತ್ತು. ಆದರೆ ಮುಂದಿನ 6 ತಿಂಗಳಲ್ಲಿ ಅವರಿಗೆ ಭಡ್ತಿ ದೊರೆಯಲಿದ್ದು, ಹಾಗಾಗಿ ಇತ್ತೀಚೆಗೆ ವರ್ಗಾವಣೆ ಪ್ರಯತ್ನವನ್ನು ಕೈಬಿಟ್ಟು, ಇಲ್ಲಿಯೇ ಇರಲು ಬಯಸಿದ್ದರು.
ಆದರೆ, ಇದೀಗ ಮಂಗಳೂರಿನಲ್ಲಿ ಡ್ರಗ್ಸ್‌ ಜಾಲವನ್ನು ಭೇದಿಸಿ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿರುವ ಪೆಡ್ಲರ್‌ಗಳು ಒಬ್ಬೊಬ್ಬರಾಗಿ ಪೊಲೀಸರ ಬಲೆಗೆ ಬೀಳುತ್ತಿದ್ದಾರೆ. ಹೀಗಿರುವಾಗ, ಮಂಗಳೂರಿನಲ್ಲಿ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕುವ ತನಿಖೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಆಗಿರುವ ಶಿವ ಪ್ರಕಾಶ್‌ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಸಮಯದಲ್ಲೇ ಅವರ ವರ್ಗಾವಣೆಯಾಗಿರುವುದು ಚರ್ಚೆಗೆ ಎಡೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next