ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟಿನ ಕುರಿತು ತೀವ್ರ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ದ್ವಿವೇದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ರಾಗಿಣಿ ಆಪ್ತ ರವಿಶಂಕರ್ ಐಶಾರಾಮಿಯಾಗಿ ಲಕ್ಷಾಂತರ ರೂಪಾಯಿ ಹಣ ವ್ಯಯಿಸುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗತೊಡಗಿದೆ ಎಂದು ಮೂಲಗಳು ಹೇಳಿವೆ.
ನಟಿ ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಪರಿಚಯಸ್ಥ ರಾಹುಲ್ ಹಾಗೂ ನಟಿ ಶರ್ಮಿಳಾ ಮಾಂಡ್ರೆ ಪರಿಚಯಸ್ಥ ಎನ್ನಲಾದ ಕಾರ್ತಿಕ್ ರಾಜುವನ್ನು ವಶಕ್ಕೆ ಪಡೆದಿದ್ದರು.
ರವಿಶಂಕರ್ ನಗರದ ಡ್ರಗ್ ಪೆಡ್ಲರ್ ಗಳ ಜತೆ ಸಂಪರ್ಕ ಹೊಂದಿರುವ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದರು.
25 ಸಾವಿರ ಸಂಬಳದ ರವಿಶಂಕರ್ ರಾಗಿಣಿಗಾಗಿ ದಿನಕ್ಕೆ ಒಂದು ಲಕ್ಷ ರೂ. ಖರ್ಚು!
ಆರ್ ಟಿಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ರವಿಶಂಕರ್ ದಿನಂಪ್ರತಿ ಆಟೋದಲ್ಲಿ ಕಚೇರಿಗೆ ಬರುತ್ತಿದ್ದನಂತೆ. ಆದರೆ ಸಂಜೆ ಕಚೇರಿ ಕೆಲಸ ಮುಗಿದ ನಂತರ ಐಶಾರಾಮಿ ಬೆಂಜ್ ಕಾರಿನಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ. ಕೇವಲ 25 ಸಾವಿರ ಸಂಬಳ ಇರುವ ರವಿಶಂಕರ್ ನಟಿ ರಾಗಿಣಿಗಾಗಿ ಪ್ರತಿದಿನ ಒಂದು ಲಕ್ಷ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾನಂತೆ! ಇದೀಗ ವಿಚಾರಣೆ ವೇಳೆ ಸಿಸಿಬಿ ಅಧಿಕಾರಿಗಳ ಮುಂದೆ ಹಲವು ವಿಷಯಗಳನ್ನು ಬಾಯ್ಬಿಟ್ಟಿರುವ ರವಿಶಂಕರ್ ಆದಾಯ ಮೂಲದ ಬಗ್ಗೆ ಅಧಿಕಾರಿಗಳಿಗೆ ಅಚ್ಚರಿ ಎನಿಸುವಷ್ಟು ವಿವರಗಳು ಹೊರಬೀಳತೊಡಗಿದೆ ಎಂದು ವರದಿ ಹೇಳಿದೆ.
ಈತ ಆರ್ ಟಿಒ ಕಚೇರಿಯಲ್ಲಿ ಫ್ಯಾನ್ಸಿ ನಂಬರ್ ಅನ್ನು ಪ್ರತಿಷ್ಠಿತ ವ್ಯಕ್ತಿಗಳಿಗೆ ಹೊಂದಿಸಿ ಕೊಡುತ್ತಿದ್ದನಂತೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದಾನೆಂದು ಹೇಳಲಾಗಿದೆ. ಈತನ ತಂದೆ ತೀರಿ ಹೋದ ಮೇಲೆ ಚಿಕ್ಕಮ್ಮನ ಪ್ರಭಾವದ ಮೂಲಕ ಆರ್ ಟಿಒ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಮೂಲಗಳು ಹೇಳಿವೆ.
ಸಾಕ್ಷ್ಯ ನಾಶದ ಮೂಲಕ ರಾಗಿಣಿ ಮಾಸ್ಟರ್ ಪ್ಲ್ಯಾನ್?
ಯಲಹಂಕದಲ್ಲಿರುವ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಲು ಕಾರಣವಾಗಿದ್ದ ಅಂಶ ಏನೆಂದರೆ, ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ ಕೂಡಾ ರಾಗಿಣಿ ಕುಂಟು ನೆಪ ಹೇಳಿ ಜಾರಿಕೊಂಡಿದ್ದು, ಇದರಿಂದಾಗಿ ರಾಗಿಣಿ ಸಾಕ್ಷ್ಯ ನಾಶಕ್ಕೆ ಮುಂದಾಗಬಹುದು ಎಂದು ಅಂದಾಜಿಸಿ, ಕೋರ್ಟ್ ನಲ್ಲಿ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಗುರುವಾರ ರಾಗಿಣಿ ತಾನು ಪ್ಲಾಸ್ಮಾ ದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇದೆ ಎಂದು ಸಿಸಿಬಿ ಅಧಿಕಾರಿಗಳಿಗೆ ತಿಳಿಸಿ ವಿಚಾರಣೆಗೆ ಹಾಜರಾಗುವುದರಿಂದ ಗೈರುಹಾಜರಾಗಿದ್ದರು. ಆದರೆ ನಟಿ ರಾಗಿಣಿ ಸಾಕ್ಷ್ಯ ನಾಶದ ಉದ್ದೇಶದಿಂದ ಮೊಬೈಲ್ ನಂಬರ್ ಬದಲಾಯಿಸಿ ವಾಟ್ಸಪ್ ಚಾಟ್ ಅನ್ನು ಡಿಲೀಟ್ ಮಾಡಿ, ಹೊಸ ವಾಟ್ಸಪ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ರಾಗಿಣಿ ಮನೆಯಲ್ಲಿ ಸಿಸಿಬಿ ಅಧಿಕಾರಿಗಳು ಮೊಬೈಲ್ ಫೋನ್, ಲ್ಯಾಪ್ ಟಾಪ್ ಅನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.