Advertisement
ಡ್ರಗ್ಸ್ ಜಾಲವನ್ನು ಭೇದಿಸಲು ಕಾರ್ಯಾಚರಣೆ ಮುಂದುವರಿಸಿರುವ ಸಿಸಿಬಿ ಪೊಲೀಸರು ಫ್ರಾಂಕ್ ಸಂಡೇ ಇಬೆಬುಚಿ ಮತ್ತು ಶಮೀನ್ ಫೆರ್ನಾಂಡಿಸ್ ಅವರನ್ನು ಬೆಂಗಳೂರಿನಲ್ಲಿ ಹಾಗೂ ಶಾನ್ ನವಾಸ್‌ನನ್ನು ಮುಂಬಯಿಯಲ್ಲಿ ವಶಕ್ಕೆ ಪಡೆದಿದ್ದರು. ಅ. 1ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಷ್ಟಡಿಗೆ ಪಡೆದಿದ್ದರು. ಇದೀಗ ವಿಚಾರಣೆ ಮುಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಇಬ್ಬರು ಆರೋಪಿಗಳಿಂದ ಪೊಲೀಸರು ಡ್ರಗ್ ಸರಬರಾಜು ಮತ್ತು ಸೇವನೆ ಸಂಬಂಧ ಕೆಲವು ಮಹತ್ವದ ಮಾಹಿತಿಗಳನ್ನು ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಡ್ರಗ್ಸ್ ಪೆಡ್ಲರ್‌ಗಳ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸರಿಗೆ ಕೆಲವು ಮಂದಿ ಪೆಡ್ಲರ್‌ಗಳು ಹೊರ ರಾಜ್ಯಗಳಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಆದರೆ ಈಗ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚಿನ ತನಿಖೆಗೆ ಅಡ್ಡಿಯಾಗಿ ಪರಿಣಮಿಸಿದೆ. ಈಗಾಗಲೇ ಹೊರ ರಾಜ್ಯಗಳಿಗೆ ತೆರಳಿದ್ದ ಕೆಲವು ಪೊಲೀಸರು ಕೊರೊನಾ ಭಯದಿಂದ ವಾಪಸ್ ಬಂದಿದ್ದಾರೆ. ಹೀಗಿರುವಾಗ ಮಂಗಳೂರಿನಲ್ಲಿರುವ ಡ್ರಗ್ಸ್ ಜಾಲದ ನೆಟ್‌ವರ್ಕ್ ಹೊರ ರಾಜ್ಯಗಳಲ್ಲಿ ಇರುವ ಕಾರಣ ಅದರ ಜಾಡು ಹಿಡಿದು ಆರೋಪಿಗಳನ್ನು ಕರೆತರುವ ಮೂಲಕ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸುವುದು ಇದೀಗ ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.