Advertisement

JSS‌ ಆಸ್ಪತ್ರೆಯಲ್ಲಿ ಆಕ್ಸ್‌ಫ‌ರ್ಡ್‌ ಲಸಿಕೆ ಪ್ರಯೋಗ

02:23 AM Aug 04, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಸೋಂಕು ನಿಗ್ರಹಕ್ಕೆ ಹೊಸ ಭರವಸೆ ಎನಿಸಿರುವ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಲಸಿಕೆಯನ್ನು ಭಾರತದಲ್ಲಿ ಮನುಷ್ಯರ ಮೇಲೆ ಪ್ರಯೋಗಾರ್ಥವಾಗಿ ಬಳಸಲು ನಿರ್ಧರಿಸಲಾಗಿದೆ.

Advertisement

ದೇಶದ ಪ್ರಮುಖ ಆಸ್ಪತ್ರೆಗಳನ್ನು ಇದಕ್ಕಾಗಿ ಪಟ್ಟಿ ಮಾಡಲಾಗಿದ್ದು, ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾನ ಪಡೆದಿದೆ.

ಲಸಿಕೆಯ ಮನುಷ್ಯರ ಮೇಲೆ ಪ್ರಯೋಗಕ್ಕಾಗಿ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ), ಭಾರತೀಯ ಸೀರಮ್‌ ಸಂಸ್ಥೆ (ಎಸ್‌ಐಐ)ಗೆ ಅನುಮತಿ ನೀಡಿದೆ. ಹಾಗಾಗಿ ಪರೀಕ್ಷೆಗೆ ಅನುಕೂಲವಿರುವ ಆಸ್ಪತ್ರೆಗಳನ್ನು ಎಸ್‌ಐಐ ಪಟ್ಟಿ ಮಾಡಿದೆ.

ಜೆಎಸ್‌ಎಸ್‌ ಆಸ್ಪತ್ರೆಯು ರಾಜ್ಯದಲ್ಲಿ ಪ್ರಯೋಗಕ್ಕೆ ಆಯ್ಕೆಯಾದ ಎರಡನೇ ಆಸ್ಪತ್ರೆ. ಬೆಳಗಾವಿಯ ರೇಖಾ ಆಸ್ಪತ್ರೆಯನ್ನೂ ಈ ಕಾರ್ಯಕ್ಕಾಗಿ ಆರಿಸಲಾಗಿದೆ. ರೇಖಾ ಆಸ್ಪತ್ರೆಯಲ್ಲಿ ಈಗಾಗಲೇ ಸ್ವದೇಶೀ ಉತ್ಪಾದನೆಯಾಗಿರುವ ಕೊವ್ಯಾಕ್ಸಿನ್‌ ಲಸಿಕೆಯ ಪ್ರಯೋಗವನ್ನೂ ನಡೆಸಲಾಗುತ್ತಿದ್ದು, ಆಕ್ಸ್‌ಫ‌ರ್ಡ್‌ ವಿ.ವಿ. ಲಸಿಕೆಯನ್ನೂ ಪರೀಕ್ಷಿಸಲಾಗುತ್ತದೆ ಎಂದು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಬಸವನ ಗೌಡಪ್ಪ ತಿಳಿಸಿರು ವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

1,200 ಹಾಸಿಗೆಗಳ ಸಾಮರ್ಥ್ಯದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಸುಮಾರು 90 ಕೋವಿಡ್ 19 ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೂ. 29ರಂದು ಇದೇ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರವನ್ನೂ ಸ್ಥಾಪಿಸಲಾಗಿದೆ.

Advertisement

2 ಹಂತಗಳ ಪರೀಕ್ಷೆಗೆ ಅನುಮತಿ
ಆಕ್ಸ್‌ಫ‌ರ್ಡ್‌ ವಿ.ವಿ.ಯ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಡಿಸಿಜಿಐನಿಂದ ಅನುಮತಿ ಪಡೆದಿರುವ ಎಸ್‌ಐಐಯು ಫೇಸ್‌ 2 ಮತ್ತು ಫೇಸ್‌ 3 ಹಂತದ ಪರೀಕ್ಷೆಗಳನ್ನು ನಡೆಸಲಿದೆ. ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಶಿಫಾರಸಿನ ಮೇರೆಗೆ ರವಿವಾರ ರಾತ್ರಿ ಡಿಸಿಜಿಐ ವತಿಯಿಂದ ಎಸ್‌ಐಐಗೆ ಅನುಮತಿ ನೀಡಲಾಗಿತ್ತು.

ಪರೀಕ್ಷಾ ಹಂತದಲ್ಲಿ ಬರುವ ಫ‌ಲಿತಾಂಶಗಳನ್ನು ವಿಶ್ಲೇಷಿಸುವ ಸಲುವಾಗಿ ಡೇಟಾ ಸೇಫ್ಟಿ ಮಾನಿಟರಿಂಗ್‌ ಬೋರ್ಡ್‌ (ಡಿಎಸ್‌ಎಂಬಿ) ಎಂಬ ಮಂಡಳಿ ರಚನೆಯಾಗಲಿದೆ. ಈ ಮಂಡಳಿಯು ತನ್ನ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸೆಂಟ್ರಲ್‌ ಡ್ರಗ್ಸ್‌ ಸ್ಟ್ಯಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಶನ್‌ (ಸಿಡಿಎಸ್‌ಸಿಒ)ಗೆ ಸಲ್ಲಿಸಲಿದೆ. ಅನಂತರ ಲಸಿಕೆಯ ಸಾರ್ವಜನಿಕ ಬಳಕೆ ಬಗ್ಗೆ ಕೇಂದ್ರ ಸರಕಾರ ನಿರ್ಧಾರ ಕೈಗೊಳ್ಳಲಿದೆ.

ಲಸಿಕೆ ಕೆಲಸ ಮಾಡುತ್ತದೆಯೇ ಎಂದು ತಿಳಿದುಕೊಳ್ಳಲು ನಡೆಸುವ ಪ್ರಯೋಗ ಇದಾಗಿದ್ದು, ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಯಲ್ಲಿ ಪ್ರಾಥಮಿಕ ಪ್ರಕ್ರಿಯೆಗಳನ್ನು ನಡೆಸಿದ ಅನಂತರ ಲಸಿಕೆಯನ್ನು ಪ್ರಯೋಗಕ್ಕೆ ಕಳುಹಿಸಲಾಗುತ್ತದೆ. ಲಸಿಕೆ ಪ್ರಯೋಗ ಸಂಬಂಧ ಇನ್ನಷ್ಟು ಸೂಚನೆಗಳನ್ನು ಐಸಿಎಂಆರ್‌ ಮುಂದಿನ ದಿನಗಳಲ್ಲಿ  ನೀಡಲಿದೆ.
– ಡಾ| ಎಚ್‌. ಬಸವನ ಗೌಡಪ್ಪ, ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next