ಬೆಂಗಳೂರು: ಗಾಂಜಾ ಮಿಶ್ರಿತ ಚಾಕಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಯನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಖಾನಾಪುರ ಮೂಲದ ಶಮೀರ್ ಅಕ್ತರ್ (35) ಬಂಧಿತ.
ಆರೋಪಿಯಿಂದ 300 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಲಾರಿ ಸ್ಟಾಂಡ್ ಬಳಿ ಮಾದಕ ವಸ್ತು ತುಂಬಿದ್ದ ಚಾಕಲೆಟ್‌ಗಳನ್ನು 10 ಚೀಲಗಳಲ್ಲಿ ತುಂಬಿಕೊಂಡು ಆಟೋದಲ್ಲಿ ಕೊಂಡೊಯ್ಯುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಈತ ಸೀರೆ ವ್ಯಾಪಾರಕ್ಕೆಂದು ಬೆಂಗಳೂರಿಗೆ ಬಂದಿದ್ದು, ಕೆಲ ದಿನಗಳ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನ ಪರಿಚಯವಾಗಿ, ಆತನ ಸೂಚನೆ ಮೇರೆಗೆ ಮಾದಕ ವಸ್ತು ಮಾರಾಟ ದಂಧೆಗೆ ಇಳಿದಿದ್ದ. ತನ್ನ ಊರಿನಲ್ಲಿ ತಯಾರಾಗುವ ಗಾಂಜಾ ಮಿಶ್ರಿತ ಚಾಕಲೆಟ್ ಗಳನ್ನು ನಗರಕ್ಕೆ ತರಿಸಿಕೊಂಡು ಇಲ್ಲಿನ ಕೆಲ ಪ್ರಾವಿಜನ್ ಸ್ಟೋರ್‌ಗಳಿಗೆ ಮಾರಾಟ ಮಾಡುತ್ತಿದ್ದ.
ಪ್ರಮುಖವಾಗಿ ಕೂಲಿ ಕಾರ್ಮಿಕರೇ ಆರೋಪಿಯ ಟಾರ್ಗೆಟ್ ಆಗಿದ್ದು, ಲಾರಿ ಸ್ಟಾಂಡ್, ಆರ್‌ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹೆಚ್ಚು ಭೇಟಿ ನೀಡುವ ಪ್ರಾವಿಜನ್ ಸ್ಟೋರ್‌ಗಳಿಗೆ ಗಾಂಜಾ ಮಿಶ್ರಿತ ಚಾಕಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಪೀಣ್ಯ ಉಪವಿಭಾಗದ ಎಸಿಪಿ ಸದಾನಂದ ಎ. ತಿಪ್ಪಣ್ಣವರ್, ಠಾಣಾಧಿಕಾರಿ ಪಿ.ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
60 ರೂ.ಗೆ ಚಾಕಲೆಟ್
ಆರೋಪಿ ಶಮೀರ್ ಅಕ್ತರ್ ಮಾರಾಟ ಮಾಡುತ್ತಿದ್ದ ಚಾಕಲೆಟ್‌ಗಳನ್ನು ಹೆಚ್ಚಾಗಿ ಕೂಲಿ ಕಾರ್ಮಿಕರೇ ಖರೀದಿಸುತ್ತಿದ್ದರು. ಪ್ರತಿ ಚಾಕಲೆಟ್‌ಗೆ 50-60 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಬೇರೆ ಚಾಕೋಲೆಟ್ ಕವರ್‌ಗಳಿಗಿಂತ ಇವುಗಳಿಗೆ ವಿಶೇಷವಾಗಿ ಪ್ಯಾಕ್ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು