Advertisement
ವಿಶ್ವದ ಭೂಪಟದಲ್ಲಿ ಐಟಿ-ಬಿಟಿ ಹಬ್, ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಒಳಪಟ್ಟಿರುವ ರಾಜ್ಯ ರಾಜಧಾನಿಯು ಮಕ್ಕಳ ಡ್ರಗ್ಸ್‌ಯಾರ್ಡ್ ಆಗಿ ಮಾರ್ಪಡುತ್ತಿರುವುದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಅಂಗಡಿಗಳಲ್ಲಿ ಚಾಕೊಲೇಟ್ ಸಿಗುವ ಮಾದರಿಯಲ್ಲೇ ಎಲ್ಲೆಂದರಲ್ಲಿ ಡ್ರಗ್ಸ್‌ಗಳು ಮಕ್ಕಳ ಕೈಗೆ ಸಿಗುತ್ತಿರುವುದು ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಬೆಂಗಳೂರೊಂದರಲ್ಲೇ ವಾರ್ಷಿಕವಾಗಿ ಸುಮಾರು 136 ಕೋಟಿ ರೂ.ಗೂ ಅಧಿಕ ಡ್ರಗ್ಸ್ ವಹಿವಾಟು ನಡೆಯುತ್ತಿವೆ ಎಂಬುದನ್ನು ಪೊಲೀಸ್ ಮೂಲಗಳು ಅಂದಾಜಿಸಿವೆ. ಪ್ರತಿಷ್ಠಿತ ಎಂಜಿನಿಯರಿಂಗ್, ಮೆಡಿಕಲ್, ಡಿಗ್ರಿ ಕಾಲೇಜುಗಳ ವಿದ್ಯಾರ್ಥಿಗಳೇ ಪೆಡ್ಲರ್‌ಗಳ ಟಾರ್ಗೆಟ್. ತಾವು ಕೇಳಿದಷ್ಟು ದುಡ್ಡು ಕೊಟ್ಟರೆ ವಿದ್ಯಾರ್ಥಿಗಳು ಸೂಚಿಸುವ ಸ್ಥಳಗಳಿಗೆ ಮಾದಕ ವಸ್ತು ಪೂರೈಸುವ ಜಾಲ ರಾಜ್ಯ ರಾಜಧಾನಿಯಾದ್ಯಂತ ವಿಸ್ತರಿಸಿವೆ.
Related Articles
Advertisement
ಮಾದಕ ವಸ್ತುಗಳ ಪೂರೈಕೆ ಹೇಗೆ ? : ನಗರದ ಪ್ರತಿಷ್ಠಿತ ಕಾಲೇಜು, ಪ್ರೌಢ ಶಾಲೆಗಳ ಬಳಿಯಿರುವ ನಿರ್ಜನ ಪ್ರದೇಶಗಳೇ ಪೆಡ್ಲರ್‌ಗಳ ಮಾರಾಟ ಸ್ಥಳವಾಗಿದ್ದು, ಗಾಂಜಾ, ಕೊಕೇನ್, ಬ್ರೌನ್‌ಶುಗರ್ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಎಲ್‌ಎಸ್‌ಡಿ ಸ್ಟ್ರಿಪ್ಸ್, ಎಂಡಿಎಂಎ ಮಾತ್ರೆಗಳಂತಹ ಡ್ರಗ್ಸ್‌ಗಳು ವಿದೇಶಿ ಪೆಡ್ಲರ್‌ಗಳಿಂದ ಪೂರೈಕೆಯಾಗುತ್ತಿದೆ. ಇದಲ್ಲದೇ, ಪಾರ್ಕ್‌ಗಳು, ದೊಡ್ಡ ಬಸ್ ನಿಲ್ದಾಣಗಳು, ಜನರ ಓಡಾಟವಿಲ್ಲದ ನಿರ್ಜನ ಪ್ರದೇಶಗಳು, ನಿರ್ಮಾಣ ಹಂತದ ಕಟ್ಟಡಗಳು, ಡ್ಯಾನ್ಸ್ ಬಾರ್‌ಗಳು, ಕ್ಲಬ್‌ಗಳಲ್ಲೂ ಹೇರಳವಾಗಿ ಮಾದಕ ದ್ರವ್ಯ ಮಾರಾಟವಾಗುತ್ತಿದೆ.
ಇದಲ್ಲದೇ ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗಳು, ವಿವಿಧ ವೆಬ್‌ಸೈಟ್‌ಗಳು, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟೆಲಿಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಲ್ಲೇ ಬುಕ್ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳುವ ವ್ಯವಸ್ಥೆಯೂ ಹುಟ್ಟಿಕೊಂಡಿದೆ. ಇದಲ್ಲದೇ ಇತ್ತೀಚೆಗೆ ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ಆಹಾರದ ಬಾಕ್ಸ್‌ನೊಳಗೆ ಡ್ರಗ್ಸ್ ಇಟ್ಟು ಮನೆ ಬಾಗಿಲಿಗೆ ತಲುಪಿಸುವ ಹಂತಕ್ಕೆ ಈ ದಂಧೆ ಹಬ್ಬಿದೆ. ಮುಂಬೈನಿಂದ ಹೇರಳವಾಗಿ ಎಂಡಿಎಂಎ, ಎಲ್‌ಎಸ್‌ಡಿ ಅಂತಹ ಡ್ರಗ್ಸ್‌ಗಳು ಬೆಂಗಳೂರಿಗೆ ಕಾಲಿಡುತ್ತಿದ್ದರೆ, ಗಾಂಜಾ, ಅಫೀಮು, ಹೆರಾಯಿನ್‌ನಂತಹ ಮಾದಕ ವಸ್ತುಗಳು ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಲದಿಂದ ರೈಲಿನ ಮೂಲಕ ಸರಬರಾಜು ಆಗುತ್ತಿದೆ.
ವಿದೇಶಿ ಪೆಡ್ಲರ್‌ಗಳ ಹಾವಳಿ : ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದ ಗುಡ್ಡಗಾಡು ಪ್ರದೇಶಗಳಿಂದ ರೈಲು, ಗೂಡ್ಸ್ ವಾಹನಗಳಲ್ಲಿ ಹೇರಳವಾಗಿ ಬೆಂಗಳೂರಿಗೆ ಗಾಂಜಾ ಪೂರೈಕೆಯಾದರೆ. ಎಲ್‌ಎಸ್‌ಡಿ, ಅμàಮು, ಕೊಕೇನ್, ಎಂಡಿಎಂಎ, ಬ್ರೌನ್‌ಶುಗರ್‌ನಂತಹ ಡ್ರಗ್ಸ್‌ಗಳು ವಿದೇಶಿ ಪಡ್ಲರ್‌ಗಳಿಂದ ಪೂರೈಕೆಯಾಗುತ್ತಿದೆ. ಹೊರಗೆ ಕೆ.ಜಿ. ಲೆಕ್ಕದಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುವ ಪೆಡ್ಲರ್‌ಗಳು, ನಗರದಲ್ಲಿ 30 ರಿಂದ 50 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ವಿದೇಶಿ ಪೆಡ್ಲರ್‌ಗಳು ಡ್ರಗ್ಸ್ ಮಾರಾಟದಿಂದಲೇ ಲಕ್ಷ-ಲಕ್ಷಗಳಿಸಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ನಗರದಲ್ಲಿರುವ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳು ಹಾಗೂ ಉತ್ತರ ಭಾರತ ಮೂಲದ ಮಹಿಳೆಯರಿಂದಲೇ ಡ್ರಗ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಸಿಸಿಬಿ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಪೆಡ್ಲರ್‌ಗಳೇ ವಿಚಾರಣೆ ವೇಳೆ ತಿಳಿಸಿದ್ದಾರೆ.
ಗಾಂಜಾ ಪೆಡ್ಲಿಂಗ್‌ಗಿಳಿದ ನಕ್ಸಲೈಟ್ಸ್? : ಶೋಷಣೆಗೆ ಒಳಗಾದ ಸಮುದಾಯದ ರಕ್ಷಣೆಗಾಗಿ ಹುಟ್ಟಿಕೊಂಡಿರುವ “ನಕ್ಸಲರು’ ಇದೀಗ ತಮ್ಮ ಮೂಲ ಉದ್ದೇಶ ಮರೆತು ಜೀವನೋಪಾಯಕ್ಕಾಗಿ ಗಾಂಜಾ ಪೆಡ್ಲಿಂಗ್‌ಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದೇಶದ 60 ಜಿಲ್ಲೆಗಳಲ್ಲಿ ದಟ್ಟ ಕಾನನದ ನಡುವೆ ನೆಲೆ ಕಂಡುಕೊಂಡು ಫಂಡಿಂಗ್, ಜೀವನೋಪಾಯ, ಶಸ್ತ್ರಾಸ್ತ್ರ ಖರೀದಿಗೆ ಆದಾಯವಿಲ್ಲದೇ ಗಾಂಜಾ ಬೆಳೆದು ವಾರ್ಷಿಕವಾಗಿ ಕೋಟ್ಯಂತರ ರೂ. ಸಂಪಾದಿಸುತ್ತಿದ್ದಾರೆ. ಕರ್ನಾಟಕಕ್ಕೆ ಶೇ.70ರಷ್ಟು ಗಾಂಜಾ ನಕ್ಸಲರ ಮೂಲಕ ಪೂರೈಕೆಯಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಆಂಧ್ರಪ್ರದೇಶ ಹಾಗೂ ಒಡಿಶಾ ಗಡಿ ಭಾಗದಲ್ಲಿರುವ ಅರಕುವ್ಯಾಲಿಯ ದಟ್ಟ ಅರಣ್ಯ ಪ್ರದೇಶದೊಳಗೆ ನೂರಾರು ಎಕರೆಯಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಅವರ ಸಂಪರ್ಕದಲ್ಲಿರುವ ಡ್ರಗ್ಸ್ ಡೀಲರ್‌ಗಳು ಬೆಂಗಳೂರು ಡ್ರಗ್ಸ್ ಡೀಲರ್‌ಗಳ ಒಡನಾಟ ಹೊಂದಿದ್ದಾರೆ. ಇಲ್ಲಿ ಸಿಗುವ ಹಸಿಗಾಂಜಾ ಒಣಗಿಸಿ ಸಣ್ಣ ಪ್ಯಾಕೆಟ್‌ಗಳಲ್ಲಿ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಬಂಧಿತ ಪೆಡ್ಲರ್‌ಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಅಪ್ರಾಪ್ತರ ಮೇಲೆ ನಿಗಾ ವಹಿಸಲಾಗುತ್ತಿದೆ. ಮಕ್ಕಳು ಫ್ಯಾಷನ್ ಎಂಬ ಭ್ರಮೆಯಲ್ಲಿ ಡ್ರಗ್ಸ್‌ಗೆ ದಾಸರಾಗುವ ಸಾಧ್ಯತೆಗಳಿದ್ದು, ಮಾದಕ ವಸ್ತುಗಳ ಬಗ್ಗೆಯೂ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ ಅರಿವು ಮೂಡಿಸಬೇಕು. -ಪಿ.ಕೃಷ್ಣಕಾಂತ್, ಡಿಸಿಪಿ, ದಕ್ಷಿಣ ವಿಭಾಗ
ಡ್ರಗ್ಸ್‌ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. ಡ್ರಗ್ಸ್ ಸೇವನೆ ಅಪಾಯಕಾರಿ ಎಂಬ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. – ಎಸ್.ಗಿರೀಶ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ.
ಡ್ರಗ್ಸ್‌ನಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಹುತೇಕ ಕೇಸ್‌ನಲ್ಲಿ ಪ್ರಭಾವಿಗಳು ಮಕ್ಕಳು ಹೆಚ್ಚಾಗಿ ಈ ಚಟಕ್ಕೆ ಅಂಟಿಕೊಳ್ಳುತ್ತಿದ್ದು, ಅಮಾಯಕ ಮಕ್ಕಳಿಗೂ ಈ ಡ್ರಗ್ಸ್ ಚಟ ಅಂಟಿಸುತ್ತಾರೆ. ಇದರಿಂದ ಪಾಲಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು. -ಡಾ.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
-ಅವಿನಾಶ್ ಮೂಡಂಬಿಕಾನ