Advertisement

Drugs: ಹೊಸವರ್ಷಕ್ಕೆ ತಂದಿದ್ದ 52 ಲಕ್ಷ ರೂ.ಡ್ರಗ್ಸ್‌ ವಶ, ವಿದೇಶಿಗ ಸೇರಿ ಮೂವರ ಬಂಧನ

01:10 PM Dec 24, 2023 | Team Udayavani |

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ನಗರದಲ್ಲಿ ಡ್ರಗ್ಸ್‌ ಮಾರಾಟಗಾರರ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು 2 ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ವಿದೇಶಿ ಪ್ರಜೆ ಹಾಗೂ ಇಬ್ಬರು ಕೇರಳ ಮೂಲದ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಜೋಶು ನೆಲ್ಸನ್‌ ಕಾಲು (50) ಮತ್ತು ಕೇರಳ ಮೂಲದ ಅಬ್ದುಲ್‌ ಅಹ್ಮದ್‌(42) ಹಾಗೂ ನಿಸಮ್‌(38) ಬಂಧಿತರು.

ಆರೋಪಿಗಳಿಂದ 52.78 ಲಕ್ಷ ರೂ. ಮೌಲ್ಯದ 86.89 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌, 100 ಎಲ್‌ಎಸ್‌ಡಿ ಸ್ಟ್ರೀಪ್ಸ್‌, 253 ಎಕ್ಸೈಸಿ ಪಿಲ್ಸ್‌ , 2.5 ಗ್ರಾಂ ಕೊಕೇನ್‌, ಮೂರು ಮೊಬೈಲ್‌ಗ‌ಳು, ತೂಕದ ಯಂತ್ರ, ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ವಿದೇಶಿ ಪ್ರಜೆ ಬಂಧನ: ಒಂದು ವರ್ಷದ ಹಿಂದೆ ವ್ಯವಹಾರಿಕ ವೀಸಾ ಪಡೆದು ಭಾರತಕ್ಕೆ ಬಂದಿರುವ ಆಫ್ರಿಕಾ ಪ್ರಜೆ ಜೋಶು ನೆಲ್ಸನ್‌ ಕಾಲು, ಮೂರು ತಿಂಗಳಿಂದ ಬೇಗೂರಿನ ಹೊಂಸಂದ್ರದ ಅಯ್ಯಪ್ಪ ದೇವಸ್ಥಾನ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನಗರದಲ್ಲಿ ವಾಸವಾಗಿರುವ ಆಫ್ರಿಕಾ ಮತ್ತು ನೈಜೀರಿಯಾ ದೇಶದ ಇತರೆ ಪ್ರಜೆಗಳಿಂದ ಕಡಿಮೆ ಮೊತ್ತಕ್ಕೆ ಮಾದಕ ವಸ್ತು ಖರೀದಿಸಿ, ಬಳಿಕ ಟೆಕಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಇಬ್ಬರು ಕೇರಳಿಗರ ಬಂಧನ: ಕೋರಮಂಗಲದ 7ನೇ ಬ್ಲಾಕ್‌ನ ಹೋಟೆಲ್‌ವೊಂದರಲ್ಲಿ ಇಬ್ಬರು ವ್ಯಕ್ತಿಗಳು ಡ್ರಗ್ಸ್‌ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಮೇರೆಗೆ ಹೋಟೆಲ್‌ ಮೇಲೆ ದಾಳಿ ನಡೆಸಿ ಇಬ್ಬರು ಕೇರಳಿಗರನ್ನು ಬಂಧಿಸಲಾಗಿದೆ. ಕೇರಳ ಮೂಲದ ಅಬ್ದುಲ್‌ ಅಹ್ಮದ್‌ ಮತ್ತು ನಿಸಮ್‌ ಎಂಬುವವರನ್ನು ಮಾಲು ಸಹಿತ ಬಂಧಿಸಲಾಗಿದೆ. ಆರೋಪಿಗಳು ಸ್ಥಳೀಯ ಪೆಡ್ಲರ್‌ಗಳಿಂದ ಕಡಿಮೆ ದರಕ್ಕೆ ಮಾದಕವಸ್ತು ಖರೀದಿಸಿ, ಪರಿಚಿತ ಗಿರಾಕಿಗಳಿಗೆ ದುಬಾರಿ ದರಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next