ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಪಾರ್ಟಿಗಳಿಗೆ ಪೂರೈಸಲು ಬೆಡ್‌ಶೀಟ್ ಕವರ್, ಸೋಪ್ ಬಾಕ್ಸ್, ಚಾಕಲೇಟ್ ಬಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ತರಿಸಿ ಸಂಗ್ರಹಿಸಿಟ್ಟಿದ್ದ ನೈಜೀರಿಯಾ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಆತನಿಂದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಪಾರ್ಟಿ ಡ್ರಗ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನೈಜೇರಿಯಾ ಮೂಲದ ಲಿಯೋ ನಾರ್ಡ್ ಒಕ್ವುಡಿಲಿ (43) ಬಂಧಿತ. ಈತನಿಂದ 16 ಕೋಟಿ ರೂ. ಮೌಲ್ಯದ ಎಂಡಿ ಎಂಎ ಕ್ರಿಸ್ಟಲ್ ಹಾಗೂ 5 ಕೋಟಿ ರೂ. ಮೌಲ್ಯದ ಕೋಕೇನ್, ಒಂದು ಮೊಬೈಲ್, 3 ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈತನ ವಿರುದ್ಧ ರಾಮ ಮೂರ್ತಿನಗರ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೋಪ್, ಚಾಕಲೇಟ್ ಬಾಕ್ಸ್‌ಗಳಲ್ಲಿ ಡ್ರಗ್ಸ್: ನೈಜೇರಿಯಾ ಪ್ರಜೆಯಾಗಿರುವ ಆರೋಪಿ, ಒಂದು ವರ್ಷದ ಹಿಂದೆ ವ್ಯವಹಾರಿಕ ವೀಸಾ ಪಡೆದು ಬೆಂಗ ಳೂರಿಗೆ ಬಂದಿದ್ದು, ರಾಮಮೂರ್ತಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ತನ್ನ ದೇಶದ ಇತರೆ ಸ್ನೇಹಿತರ ಜತೆ ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡಿದ್ದ. ಈ ಮಧ್ಯೆ ಮುಂಬೈ, ದೆಹಲಿ, ಗೋವಾ ಹಾಗೂ ಇತರೆ ರಾಜ್ಯಗಳಲ್ಲಿರುವ ನೈಜೀರಿಯಾ ಪ್ರಜೆಗಳ ಸಂಪರ್ಕದಿಂದ ನಗರಕ್ಕೆ ಮಾದಕ ವಸ್ತುಗಳನ್ನು ತರಿಸುತ್ತಿದ್ದ. ಇತ್ತೀಚೆಗೆ ಪೊಲೀಸರು ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ವಿಶೇಷ ಕಾರ್ಯಾ ಚರಣೆ ಆರಂಭಿಸಿದ್ದರಿಂದ ಪೊಲೀಸರ ದಿಕ್ಕು ತಪ್ಪಿಸಲು ಚೂಡಿದಾರ್, ಬೆಡ್‌ಶೀಟ್ ಕವರ್ ಗಳು, ಸೋಪ್ ಬಾಕ್ಸ್ ಮತ್ತು ಚಾಕಲೇಟ್ ಬಾಕ್ಸ್ ಗಳಲ್ಲಿ ಎಂಡಿಎಂಎ ಕ್ರಿಸ್ಟಲ್ ಮತ್ತು ಕೊಕೇನ್ ಅನ್ನು ಕೊರಿಯರ್ ಹಾಗೂ ದೈಹಿಕವಾಗಿ ಕೆಲ ವ್ಯಕ್ತಿಗಳ ರೈಲು ಹಾಗೂ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತರಿಸಿಕೊಂಡು ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಹೇಳಿದರು.
ಹೊಸ ವರ್ಷಾಚರಣೆಗೆ ಪೂರೈಕೆ: ಆರೋಪಿಯ ಪ್ರಾಥಮಿಕ ವಿಚಾರಣೆಯಲ್ಲಿ, 2024ರ ಹೊಸ ವರ್ಷದ ಸಂದರ್ಭದಲ್ಲಿ ನಗರ ಮತ್ತು ನಗರದ ಹೊರವಲಯದಲ್ಲಿ ನಡೆಯುವ ಪಾರ್ಟಿಗಳು, ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಪಿಜಿ ವಾಸಿಗಳ ಮಾಹಿತಿ ನೀಡಲು ಸೂಚನೆ : ಪಿಜಿಗಳಲ್ಲಿ ವಾಸವಾಗಿರುವವರ ಮಾಹಿತಿಯನ್ನು ಆ್ಯಪ್ ಮೂಲಕ ದಾಖಲಿಸಲು ಈಗಾಗಲೇ ಪಿಜಿ ಮಾಲೀಕರಿಗೆ ಸೂಚಿಸಲಾಗಿದೆ. ಅದೇ ರೀತಿ ಬಾಡಿಗೆ ಮನೆಗಳ ಮಾಲೀಕರು ತಮ್ಮ ಬಾಡಿಗೆದಾರರ ಆಧಾರ್ ಕಾರ್ಡ್ ಹಾಗೂ ಇತರೆ ಮಾಹಿತಿಯನ್ನು ಪಡೆದುಕೊಂಡು ಅಗತ್ಯಬಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗುತ್ತದೆ. ಸದ್ಯ ವಿದೇಶಿ ಪ್ರಜೆ ಬಂಧನದಲ್ಲಿ ಮನೆ ಮಾಲೀಕರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.