ಕಲಬುರಗಿ: ನಗರದ ಕಿರಾಣಿ ಅಂಗಡಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನೊಬ್ಬನನ್ನು ಪೊಲೀಸರು ಬುಧವಾರ ಬಂಧಿಸಿ, 55 ಸಾವಿರ ರೂ. ಮೌಲ್ಯದ 4.52 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ರಮೇಶ ಕಾಳೆ ಎಂಬಾತನೇ ಬಂಧಿತ ಮಾಲೀಕ. ಇಲ್ಲಿನ ಬಾಪುನಗರದ ಮಾಂಗರ ವಾಡಿ ಗಲ್ಲಿ ನಿವಾಸಿಯಾದ ರಮೇಶ ಕಾಳೆ ತನ್ನ ಮನೆ ಎದುರು ಕಿರಾಣಿ ಅಂಗಡಿ ನಡೆಸುತ್ತಿದ್ದ. ಇದೇ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಕುರಿತು ಮಾಹಿತಿ ಆಧರಿಸಿ ಸೆನ್ ಪೊಲೀಸ್ ಠಾಣೆ ಪಿಎಸ್‌ಐ ವಾಹಿದ್ ಕೋತ್ವಾಲ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಗಾಂಜಾ ಸಮೇತವಾಗಿ ಸೆರೆ ಹಿಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್.ರವಿಕುಮಾರ, ಉಪ ಆಯುಕ್ತ ಅಡ್ಮೂರ ಶ್ರೀನಿವಾಸಲು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಎಎಸ್‌ಐ ರವಿಕುಮಾರ, ಪೊಲೀಸ್ ಸಿಬ್ಬಂದಿ ದೇವೇಂದ್ರಪ್ಪ, ಶಿವಕುಮಾರ, ಗುರುನಾಥ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿ ರಮೇಶ ಕಾಳೆ ಈ ಹಿಂದೆಯೂ ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆದರೂ ಈತ ಅಕ್ರಮ ದಂಧೆ ಬಿಟ್ಟಿರಲಿಲ್ಲ. ಅಲ್ಲದೇ, ಕಿರಾಣಿ ಅಂಗಡಿಯನ್ನು ಯಾವುದೇ ಅನುಮತಿ ಪಡೆಯದೇ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.