ಉಡುಪಿ: ಜಗತ್ತಿನಲ್ಲಿ ಪೆಟ್ರೋಲ್ ಮತ್ತು ಶಸ್ತ್ರಾಸ್ತ್ರ ಉದ್ಯಮಗಳ ಅನಂತರದ ದೊಡ್ಡ ವ್ಯವಹಾರ ಮಾದಕ ವಸ್ತುವಿಗೆ ಸಂಬಂಧಿಸಿದ್ದಾಗಿದೆ ಎಂದು ಮಣಿಪಾಲ ಮಾಹೆ ಕುಲಪತಿ ಡಾ| ಎಚ್. ವಿನೋದ್ ಭಟ್ ಹೇಳಿದ್ದಾರೆ.
ಬುಧವಾರ ಮಾಹೆ ವತಿಯಿಂದ ಮಣಿಪಾಲದಲ್ಲಿ ಜರಗಿದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಒಟ್ಟು ವ್ಯವಹಾರ ಈಗ ಟ್ರಿಲಿಯನ್ ಡಾಲರ್‌ಗಿಂತಲೂ ಅಧಿಕವಾಗಿದೆ. ಯುವಜನತೆ ಮಾದಕ ದ್ರವ್ಯಗಳ ಚಟಕ್ಕೆ ಬೀಳುವುದನ್ನು ತಡೆಯಲು ಅಗತ್ಯ ಕ್ರಮ ತೆಗೆದು ಕೊಳ್ಳುವುದು ಆವಶ್ಯವಾಗಿದೆ. ಡೀಲರ್‌ಗಳು ಮತ್ತು ಮಾರಾಟಗಾರರ ಮೇಲೆ ನಿಯಂತ್ರಣ ಹೇರಬೇಕಾಗಿದೆ. ಜಾಗೃತಿ ಕಾರ್ಯಕ್ರಮಗಳು ಕೂಡ ಹೆಚ್ಚಾಗಬೇಕು ಎಂದು ಡಾ| ವಿನೋದ್ ಭಟ್ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾರ್ಕಳ ಎಎಸ್‌ಪಿ ಕೃಷ್ಣಕಾಂತ್ ಅವರು ಮಾತನಾಡಿ ಯುವಜನರಲ್ಲಿ ಕುತೂಹಲ, ಫ್ಯಾಷನ್‌ಗಾಗಿ ಮಾದಕ ದ್ರವ್ಯ ಸೇವನೆ ಆರಂಭವಾಗಿ ಅದು ಚಟವಾಗಿ ಪರಿವರ್ತನೆಯಾಗುತ್ತದೆ. ಮಾದಕ ದ್ರವ್ಯಗಳ ಸಾಗಾಟ, ಮಾರಾಟ ಹಾಗೂ ಸೇವನೆ ವಿರುದ್ಧ ಆರು ತಿಂಗಳಿನಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ ಎಂದು ಹೇಳಿದರು.
ಮಾಹೆ ವಿದ್ಯಾರ್ಥಿಗಳ ಮಾದಕವಸ್ತು ವಿರೋಧಿ ಮ್ಯಾಗಜಿನ್‌ನ್ನು ಕೆಎಂಸಿಯ ಸಹಾಯಕ ಡೀನ್ ಡಾ| ಶರತ್ ರಾವ್ ಬಿಡುಗಡೆಗೊಳಿಸಿದರು. ಕೆಎಂಸಿಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ವಿನೋದ್ ನಾಯಕ್ ಉಪಸ್ಥಿತರಿದ್ದರು.
ಡಾ| ಜಿ. ಶ್ರೀಕುಮಾರ್ ಮೆನನ್ ಸ್ವಾಗ ತಿಸಿ ಡಾ| ಗೀತಾ ಮಯ್ಯ ವಂದಿಸಿದರು. ಡಾ| ಅನಿತಾ ಎಸ್. ಕಾರ್ಯಕ್ರಮ ನಿರೂಪಿಸಿದರು.