Advertisement

ಮಾದಕ ವಸ್ತು ಮಾರಾಟ; ಕ್ರಮ ಕೈಗೊಳ್ಳಿ

09:58 AM Mar 12, 2020 | Lakshmi GovindaRaj |

ವಿಧಾನಸಭೆ: ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿರುವ ಬಗ್ಗೆ ಸದನದಲ್ಲಿ ಪಕ್ಷಾತೀತವಾಗಿ ಪ್ರಸ್ತಾಪಿಸಿದ ಸದಸ್ಯರು, ಇವುಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

ಮಾದಕ ವಸ್ತು ಗಳನ್ನು ಶಾಲಾ- ಕಾಲೇಜುಗಳ ಬಳಿ ಯಾವುದೇ ಭಯ ಇಲ್ಲದೆ ಮಾರಾಟ ಮಾಡಲಾಗುತ್ತದೆ. ಯುವ ಸಮೂಹ ಇದರ ಚಟಕ್ಕೆ ಬಲಿಯಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಮಾತನಾಡಿ, ಸರ್ವಜ್ಞ ನಗರ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿರುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಮಂಜುನಾಥ್‌, ಕೆ.ಶ್ರೀನಿವಾಸಗೌಡ, ಕಾಂಗ್ರೆಸ್‌ನ ಭೀಮಾ ನಾಯಕ್‌, ಎ.ಎನ್‌.ಹ್ಯಾರೀಸ್‌ ಮಾದಕ ವಸ್ತು ಜಾಲ ರಾಜ್ಯಾದ್ಯಂತ ಹರಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಿಜೆಪಿಯ ಕೆಲವು ಸದಸ್ಯರೂ ಇದಕ್ಕೆ ಧ್ವನಿಗೂಡಿಸಿದರು.

ಸಮರ ಸಾರಿದ್ದೇವೆ: ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಾದಕ ವಸ್ತುಗಳ ವಿರುದ್ಧ ಸಮರ ಸಾರಲಾಗಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಹಂತದಲ್ಲೂ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಮಾತೇ ಇಲ್ಲ.

ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಹಚ್ಚುವುದಷ್ಟೇ ಅಲ್ಲದೆ, ಮಾದಕ ವಸ್ತುಗಳ ಬಳಕೆ ಬಗ್ಗೆಯೂ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲು ತೀರ್ಮಾನಿ ಸಲಾಗಿದೆ. ಸರ್ಕಾರದ ಜತೆ ಪಾಲಕ/ಪೋಷಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕೈ ಜೋಡಿಸ ಬೇಕಾಗಿದೆ ಎಂದು ಮನವಿ ಮಾಡಿದರು.

Advertisement

ಆನ್‌ಲೈನ್‌ ಮೂಲಕ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ. ಡಾರ್ಕ್‌ ವೆಬ್‌ಗಳು ಅದಕ್ಕಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಮೂಲ ಹುಡುಕುವ ಕೆಲಸದಲ್ಲಿ ನಾವು ನಿರತರಾಗಿದ್ದೇವೆ. ಶಾಲಾ-ಕಾಲೇಜುಗಳ ಸಮೀಪ ಅಂಗಡಿಗಳಲ್ಲಿ ಚಾಕೋಲೇಟ್‌, ಬಿಸ್ಕೆಟ್‌ಗಳ ಮೂಲಕ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ ಎಂದರು.

ಮಧ್ಯ ಪ್ರವೇಶಿಸಿದ ಕೆ.ಜೆ.ಜಾರ್ಜ್‌, ಸಿಸಿಬಿಗೆ ಹಲವಾರು ಪ್ರಕರಣಗಳು ಇರುವುದರಿಂದ ಮಾದಕ ವಸ್ತು ಮಾರಾಟ ಜಾಲದ ಬಗ್ಗೆ ಹೆಚ್ಚು ಗಮನ ಕೊಡಲು ಆಗುತ್ತಿಲ್ಲ. ಇದನ್ನು ಸಾಮಾನ್ಯವಾಗಿ ನೋಡಬಾರದು. ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿ, ಸದಾ ನಿಗಾ ವಹಿಸಿರಬೇಕು ಎಂದು ಸಲಹೆ ನೀಡಿದರು. ಎನ್‌.ಎ.ಹ್ಯಾರೀಸ್‌ ಮಾತನಾಡಿ, ಮಾದಕ ವಸ್ತು ನಿಯಂತ್ರಣ ಕಾನೂನು ತಿದ್ದುಪಡಿಯಾಗಬೇಕು. ಬಿಗಿ ಕಾನೂನಿನ ಅವಶ್ಯಕತೆ ಇದೆ ಎಂದು ಹೇಳಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, ಖಂಡಿತವಾಗಿಯೂ ಕಾನೂನಿಗೆ ತಿದ್ದುಪಡಿ ತರಲಾಗುವುದು. ಈಗಿರುವುದು 1985 ರಲ್ಲಿ ರೂಪಿಸಿರುವ ಕಾಯ್ದೆ. ಆಗಿನ ಪರಿಸ್ಥಿತಿಗೂ, ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಮಾದಕ ವಸ್ತುಗಳ ಸರಬರಾಜು ಪ್ರಕರಣಗಳಲ್ಲಿ ದೋಷಾರೋಪಣೆ ಪತ್ರ ಸಲ್ಲಿಸಿದ ನಂತರ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ಸೂಕ್ತ ನಿಗಾವಣೆ ಮತ್ತು ಮೇಲ್ವಿಚಾರಣೆಯನ್ನು ಕೋರ್ಟ್‌ ಮಾನಿಟರಿಂಗ್‌ ಸೆಲ್‌ ಮೂಲಕ ವಹಿಸಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಪ್ರತಿ ವಿಭಾಗಕ್ಕೆ ಒಂದರಂತೆ 8 ಸೆಲ್‌ ಪೊಲೀಸ್‌ ಠಾಣೆ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ವಿಶೇಷ ಜಾಗೃತಿ ಅಭಿಯಾನ: ಕೊರಿಯರ್‌, ಭಾರತೀಯ ಅಂಚೆ, ರೈಲು, ಬಸ್ಸು, ವಿಮಾನದ ಮೂಲಕ ಮಾದಕ ವಸ್ತುಗಳು ಬರುತ್ತಿವೆ. ಸಾಕಷ್ಟು ಪತ್ತೆ ಮಾಡಿದ್ದೇವೆ. ಮಾದಕ ವಸ್ತು ಮಾರಾಟ ಮಾಡುವವರನ್ನು ಪತ್ತೆ ಹಚ್ಚುವುದಷ್ಟೇ ಅಲ್ಲದೆ, ಅದನ್ನು ಖರೀದಿ ಮಾಡುವವರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿಶೇಷ ಅಭಿಯಾನವನ್ನು ಸಹ ಗೃಹ ಇಲಾಖೆಯಿಂದ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next