Advertisement
ಕೆಲವೇ ವರ್ಷಗಳ ಹಿಂದಿನವರೆಗೂ ಜನರು ಮೊಬೈಲ್ ಮಾಯೆ ಎಂದು ಹೇಳುತ್ತಿದ್ದರು. ಮೊಬೈಲ್ ಎಂಬುದು ಸ್ಮಾರ್ಟ್‌ಫೋನ್ ರೂಪ ತಾಳುತ್ತಿದ್ದಂತೆಯೇ ಅದು ಜನರಿಗೆ ಗೀಳು, ಚಟವಾಗಿ ಬದಲಾಯಿತು. ಈಗಂತೂ ಅದೊಂದು ಅಲ್ಕೋಹಾಲ್‌ನಂತೆ, ಸಿಗರೇಟಿನಂತೆ, ಗಾಂಜಾ, ಅಫೀಮಿನಂತಾಗಿದೆ! ಒಂದು ಕ್ಷಣ ಕೈಯಲ್ಲಿ ಮೊಬೈಲಿಲ್ಲದಿದ್ದರೆ ಚಡಪಡಿಸುತ್ತೇವೆ. ಜಗತ್ತಿನೊಂದಿಗೆ ನಾವು ಸಂಪರ್ಕವನ್ನೇ ಕಡಿದುಕೊಂಡುಬಿಟ್ಟೆವೇನೋ ಎಂಬಂತೆ ಕಂಗಾಲಾಗುತ್ತೇವೆ. ಟಾಯ್ಲೆಟ್ ಸೀಟ್‌ನ ಮೇಲೆ ಕೂತಾಗಲೂ ನಮಗೆ ಮೊಬೈಲ್ ಬೇಕು! ಊಟಕ್ಕೆ ಕುಳಿತಾಗಲೂ ಒಂದು ಕೈಯಲ್ಲಿ ಮೊಬೈಲ್ ಬೇಕು! ಇದು ವಾಸ್ತವವಂತೂ ಹೌದು. ಆದರೆ ಚಿಂತೆಗೀಡು ಮಾಡುವಷ್ಟು, ಇದರಿಂದ ನಾವು ಹೊರಬರಲೇ ಬೇಕು ಎನ್ನುವಷ್ಟು ಕೆಟ್ಟ ಗೀಳೇ ಎಂಬುದು ಇನ್ನೂ ಚರ್ಚೆಯ ವಿಷಯ.
Related Articles
Advertisement
ಆದರೆ ನಮ್ಮ ಸ್ಮಾಟ್‌ಫೋನ್‌ಗಳು ನಮ್ಮನ್ನು ಗೀಳಿಗೆ ಹೆಚ್ಚುವಂತೆಯೇ ತಯಾರಾಗಿರುತ್ತವೆ. ಪ್ರಖರ ಬೆಳಕು, ಆಕರ್ಷಕ ಬಣ್ಣಗಳಿರುತ್ತವೆ, ಯೂಟ್ಯೂಬ್‌ನಲ್ಲಿ ಯಾವುದೇ ವೀಡಿಯೋ ಪ್ಲೇ ಮಾಡಿದರೆ ಆಕರ್ಷಕವಾಗಿ ಕಾಣಿಸುತ್ತವೆ. ಕಣ್ಣು ನೆಟ್ಟರೆ ಅಲ್ಲಿಂದ ಕಣ್ಣು ಕೀಳುವುದು ಕಷ್ಟವಾಗುವಷ್ಟು ಮೋಹ ಅಲ್ಲಿದೆ. ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾ, ವಾಟ್ಸ್‌ಆ್ಯಪ್‌ನಂತಹ ಚಾಟ್ ಅಪ್ಲಿಕೇಶನ್‌ಗಳು ನಮ್ಮನ್ನು ಇಡೀ ದಿನ ಮುಳುಗಿಸಿಬಿಡಬಲ್ಲವು. ಫೇಸ್‌ಬುಕ್‌ನಲ್ಲಿ ಸೊðàಲ್ ಮಾಡಿ ಮುಗಿಸಲು ಸಾಧ್ಯವೇ ಇಲ್ಲ. ವಾಟ್ಸಾಪ್‌ನಲ್ಲಿ ಆತ್ಮೀಯರು ಚಾಟ್‌ಗೆ ಸಿಕ್ಕರಂತೂ ಮುಗಿದೇ ಹೋಯಿತು. ಇದರ ಹೊರತಾಗಿ ನಮ್ಮ ಮನಸಲ್ಲೇ ಗೀಳಿಗೆ ಬೀಳುವ ಜಾಳು ಇರುತ್ತದೆ. ಅಂದರೆ ನಾವು ಎಂದಿಗೂ ಯಾವುದನ್ನೋ ತ್ಯಜಿಸಲು ಇನ್ನೇನನ್ನೋ ಹುಡುಕಿಕೊಳ್ಳುತ್ತೇವೆ. ಅದು ನಮ್ಮ ಸುಪ್ತಮನಸಿನ ಗುಣ. ನಮ್ಮೊಳಗಿನ ಖನ್ನತೆಯನ್ನೋ ಅಥವಾ ಇನ್ಯಾವುದೋ ಅಂಶವನ್ನು ದೂರ ಮಾಡಲು ನಾವು ಇಂಥ ಗ್ಯಾಜೆಟ್‌ಗಳಿಗೆ ಮೊರೆಹೋಗುತ್ತೇವೆ. ಕಾಲಕ್ರಮೇಣ ಇವೇ ನಮ್ಮೊಳಗೆ ಖನ್ನತೆ ಹುಟ್ಟುಹಾಕುತ್ತವೆ.
ಡಿಜಿಟಲ್ ಡಿವೈಸ್‌ಗಳು ಆರೋಗ್ಯಕರವಲ್ಲ ಎಂಬುದು ಒಂದಷ್ಟರ ಮಟ್ಟಿಗೆ ಹೌದು. ಅಂದರೆ ನಾವು ವಿಪರೀತವಾಗಿ, ನಮ್ಮ ಅಗತ್ಯಕ್ಕಿಂತ ಹೆಚ್ಚು ಡಿಜಿಟಲ್ ಗ್ಯಾಜೆಟ್‌ಗಳನ್ನು ಬಳಸುವುದು ಅನಾರೋಗ್ಯಕರ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಡಿಜಿಟಲ್ ಡಿಟಾಕ್ಸ್‌ನ ಅಗತ್ಯ ಹುಟ್ಟಿಕೊಂಡಿದ್ದೇ ಸಾಮಾಜಿಕ ಮಾಧ್ಯಮಗಳು ಜನಪ್ರಿಯವಾದ ನಂತರ ಎಂದರೆ ನೀವು ನಂಬಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದು. ಆದರೆ ಇದರ ವಿಪರೀತ ಬಳಕೆ ನಮ್ಮಲ್ಲಿ ಉದ್ವೇಗ, ಏಕಾಗ್ರತೆ ಕೊರತೆ, ಖನ್ನತೆ ಹಾಗೂ ಸಿನಿಕತೆ ಮೂಡುವಂತೆ ಮಾಡುತ್ತದೆ. ಇದು ಹಲವು ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲೂ ತಿಳಿದುಬಂದಿದೆ. ದಿನಕ್ಕೆ ಒಟ್ಟಾರೆ ಮೂರರಿಂದ ನಾಲ್ಕು ತಾಸು ನಾವು ಫೇಸ್‌ಬುಕ್‌ನಂತಹ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ನಲ್ಲಿ ಕಾಲ ಕಳೆಯುತ್ತೇವೆ.
ಸೋಷಿಯಲ್ ಮೀಡಿಯಾಗಳೆಂದರೆ ನಮ್ಮ ಸುತ್ತಲಿರುವ ಕಲ್ಪನೆಗಿಂತ ಹೊಸದೇನೂ ಅಲ್ಲ. ಪಕ್ಕದ ಮನೆಯವರ ಬಳಿ ಕುಳಿತುಕೊಂಡು ಮಾತನಾಡುವ ಸಮಯವನ್ನೇ ನಾವು ಈಗ ಫೇಸ್‌ಬುಕ್‌ನಲ್ಲಿ ಕಳೆಯುತ್ತಿದ್ದೇವೆ. ಹಳ್ಳಿಗಳಲ್ಲಿ ಮುಸ್ಸಂಜೆ ಹೊತ್ತು ಅಂಗಡಿ ಮುಂಗಟ್ಟಿನ ಮೇಲೋ, ಹರಟೆಕಟ್ಟೆಯ ಮೇಲೋ ಕೂತು ಕಳೆಯುವ ಕಾಲವನ್ನೇ ನಾವು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದೇವೆ. ಆದರೆ ಆಗಲೂ ಇಡೀ ದಿನ ಹರಟೆಕಟ್ಟೆಯಲ್ಲಿ ಕುಳಿತು ಪಟ್ಟಾಂಗ ಹೊಡೆಯುವವರಿದ್ದಂತೆ, ಈಗಲೂ ಇಡೀ ದಿನ ಮೊಬೈಲ್ ಹಿಡಿದು ಕೂರುವವರಿದ್ದಾರೆ.ಇನ್ನೂ ಆಸಕ್ತಿಕರ ಅಂಶವೆಂದರೆ ನಮಗೆ ಈ ಟೆಕ್ ಗೀಳು ಹಿಡಿಸಿದ ತಂತ್ರಜ್ಞಾನ ದೈತ್ಯರ ಕುಟುಂಬದ ಕಥೆ ಬೇರೆಯದೇ ಸಂಗತಿ ಹೇಳುತ್ತವೆ. ನಾವು ನಮ್ಮ ಮಕ್ಕಳು ಎರಡು ವರ್ಷಕ್ಕೂ ಮೊದಲೇ ಮೊಬೈಲ್ ಹಿಡಿದು ಯೂಟ್ಯೂಬ್‌ನಲ್ಲಿ ಕಾಟೂìನ್ ಪ್ಲೇ ಮಾಡಿಕೊಂಡು ನೋಡುವುದನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತೇವೆ. ಆದರೆ ಆ್ಯಪಲ್‌ನಂಥ ಸಾಧನವನ್ನು ನಮ್ಮ ಕೈಗೆ ಕೊಟ್ಟ ಸ್ಟೀವ್ ಜಾಬ್ಸ್ ತನ್ನ ಮಕ್ಕಳಿಗೆ 14 ವರ್ಷವಾಗುವವರೆಗೂ ಮೊಬೈಲನ್ನೇ ಕೊಟ್ಟಿರಲಿಲ್ಲ. ಅವರು ಮೊಬೈಲ್ ಬಳಸಲೂ ಬಿಟ್ಟಿರಲಿಲ್ಲ! ನಮ್ಮಲ್ಲಿ ಕೆಲವರಂತೂ ಮಗುವಿಗೆ ಮೂರು ವರ್ಷವಾಗುತ್ತಿದ್ದಂತೆ ಆ್ಯಪಲ್ ಫೋನನ್ನೇ ಕೊಡಿಸುವವರಿದ್ದಾರೆ! ಆದರೆ ಮಕ್ಕಳನ್ನು ಈ ಡಿಜಿಟಲ್ ಗೀಳಿನಿಂದ ದೂರವಿಟ್ಟಷ್ಟೂ ಒಳ್ಳೆಯದು. ಫೋನ್ ಮತ್ತು ಲೈಫ್ ಮಧ್ಯೆ ಸಮತೋಲನ ಸಾಧಿಸುವುದೇ ನಮಗಿರುವ ಸಂಯಮವನ್ನು ಹೇಳುತ್ತದೆ. ನಾನು ವಿಪರೀತ ಫೋನ್ ನೋಡುತ್ತಿದ್ದೇನೆ ಎಂದುಕೊಂಡು ಫೇಸ್‌ಬುಕ್ಕನ್ನೋ, ವಾಟ್ಸ್‌ಆ್ಯಪನ್ನೋ ಡಿಲೀಟ್ ಮಾಡುವುದು ಹಾಗೂ ಇಡೀ ದಿನ ಫೇಸ್‌ಬುಕ್‌ನಲ್ಲಿ ಕಾಲ ಕಳೆಯುವುದು… ಇವೆರಡೂ ಅತಿರೇಕಗಳು! ನಮ್ಮ ನಿತ್ಯ ಜೀವನದ ಮೇಲೆ ನಮ್ಮ ಡಿಜಿಟಲ್ ಚಟುವಟಿಕೆಗಳು ಪರಿಣಾಮ ಬೀರದಂತೆ ಕಾಯ್ದುಕೊಳ್ಳುವುದೇ ಸ್ವಯಂ ಡಿಜಿಟಲ್ ಡಿಟಾಕ್ಸ್‌ನ ಮುಖ್ಯ ಅಂಶ. ತಕ್ಷಣದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಲು ನಮಗೆ ಅವಕಾಶ ನೀಡುತ್ತದೆಯಾದರೂ, ಅದನ್ನು ನಾವು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಳಸಿಕೊಳ್ಳಬೇಕು. ನೀವು ವಿಪರೀತವಾಗಿ ಡಿಜಿಟಲ್ ಸಾಧನಗಳಿಗೆ ಅಂಟಿಕೊಂಡಿದ್ದೀರಿ ಎಂದಾದರೆ ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳಬಹುದು. ವಿಪರೀತವಾಗಿ ಫೇಸ್‌ಬುಕ್ ನೋಡುತ್ತಿದ್ದೀರಿ ಎಂದಾದರೆ ಫೇಸ್‌ಬುಕ್ ಐಕಾನ್ ಅಡಗಿಸಿಡಿ. ಫೇಸ್‌ಬುಕ್‌ನಿಂದ ಬರುವ ಎಲ್ಲ ನೊಟಿಫಿಕೇಶನ್‌ಗಳನ್ನೂ ಮ್ಯೂಟ್ ಮಾಡಿ. ನೊಟಿಫಿಕೇಶನ್ ಸೌಂಡ್ ಕೇಳುತ್ತಿದ್ದಂತೆಯೇ ನಮಗೆ ಫೋನ್ ಕೈಗೆತ್ತಿಕೊಳ್ಳಬೇಕು ಎನಿಸುವ ಆಕರ್ಷಣೆಯನ್ನು ಇದು ಕಡಿಮೆ ಮಾಡುತ್ತದೆ. ಕೆಲವರು ಬೆಳಗ್ಗೆ ಎದ್ದ ತಕ್ಷಣ ಫೋನ್ ಹಿಡಿದು ನೋಡುವ ಹವ್ಯಾಸ ಹೊಂದಿರುತ್ತಾರೆ. ಗಂಟೆ ನೋಡುವ ನೆಪದಲ್ಲಿ ಸ್ಮಾರ್ಟ್‌ಫೋನ್ ಕೈಗೆತ್ತಿಕೊಂಡರೆ ಗಂಟೆ ಹೋದದ್ದೇ ಗೊತ್ತಾಗುವುದಿಲ್ಲ. ತಲೆ ಮೇಲ್ಭಾಗದಲ್ಲೊಂದು ಗಡಿಯಾರ ತಂದಿಟ್ಟುಕೊಳ್ಳಿ. ಮೊಬೈಲನ್ನು ಹಾಲ್‌ನಲ್ಲೇ ಬಿಸಾಕಿಡಿ. ಇವೆಲ್ಲ ನಮ್ಮಲ್ಲಿ ಇನ್ನಷ್ಟು ಸಂಯಮವನ್ನು ಕಲಿಸುತ್ತವೆ. ಇನ್ನೂ ಅಗತ್ಯವಿದ್ದರೆ ಧ್ಯಾನ ಯೋಗಾಸನದ ಮೊರೆ ಹೋಗಬಹುದು. – ಕೃಷ್ಣ ಭಟ್