Advertisement

ವೇತನ 30 ಸಾ.ರೂ.; ಆತ ನೀಡುತ್ತಿದ್ದುದು 1.5 ಲ.ರೂ.! ಇದು ಡ್ರಗ್ಸ್‌ ಆರೋಪಿ ರವಿಶಂಕರ್‌ ಕಥೆ

12:26 PM Sep 07, 2020 | Suhan S |

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತ ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ರವಿಶಂಕರ್‌ ಪಡೆಯುತ್ತಿದ್ದ ವೇತನ ಸರಿಸುಮಾರು 30ರಿಂದ 35 ಸಾವಿರ ರೂ. ಆದರೆ, ಈ ವೇತನಕ್ಕಾಗಿ ಆತ ಪಾವತಿಸುತ್ತಿದ್ದದ್ದು ಬರೋಬ್ಬರಿ ಒಂದೂವರೆ ಲಕ್ಷ ರೂ.!

Advertisement

ಹೌದು, ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ರವಿಶಂಕರ್‌ ಮಾಸಿಕ ವೇತನ 30-35 ಸಾವಿರ ಇದೆ. ಈ ಕೆಲಸ ನಿರ್ವಹಿಸಲು ಅನಧಿಕೃತವಾಗಿ ರವಿಶಂಕರ್‌, ಮೂವರು ನೌಕರರನ್ನು ನೇಮಿಸಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಅವರಿಗೆ ತಿಂಗಳಿಗೆ ವೇತನ ರೂಪದಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಪಾವತಿಸುತ್ತಿದ್ದ. ನಿತ್ಯ ಕೇವಲ 1 ತಾಸು ಕಚೇರಿಗೆ ಬಂದು ಸಹಿ ಮಾಡಿ ಹೋಗುತ್ತಿದ್ದ ಎಂದು ಸಹೋದ್ಯೋಗಿಗಳು ತಿಳಿಸುತ್ತಾರೆ.

ಇನ್ನು ಕಚೇರಿ ಕೆಲಸಕ್ಕೆ ಮಾತ್ರವಲ್ಲ; ಇಡೀ ದಿನ ಎಲ್ಲಿಗೇ ಹೋಗಬೇಕಾದರೂ ರವಿಶಂಕರ್‌ ಓಡಾಡುತ್ತಿದ್ದದ್ದು ಆಟೋದಲ್ಲಿ. ಇದಕ್ಕಾಗಿ ಆ ಚಾಲಕನಿಗೂ ತಿಂಗಳಿಗೆ ಸುಮಾರು 50 ಸಾವಿರ ರೂ. ನೀಡುತ್ತಿದ್ದ. ಹೀಗಾಗಿ ಹೋದಲ್ಲೆಲ್ಲಾ ಅದೇ ಆಟೋದಲ್ಲಿ ಓಡಾಡುತ್ತಿದ್ದ. ಪಾರ್ಟಿಗಳಿಗೆ ಮಾತ್ರ ಐಷಾರಾಮಿ ಕಾರುಗಳೊಂದಿಗೆ ರಸ್ತೆಗಿಳಿಯುತ್ತಿದ್ದ. ನಗರದಲ್ಲಿ ಈತ ಒಂದು ಪಬ್‌ ಕೂಡ ನಡೆಸುತ್ತಿದ್ದ. ಸಾರಿಗೆ ಇಲಾಖೆಯಿಂದ ಹಮ್ಮಿಕೊಳ್ಳುತ್ತಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಸೆಲೆಬ್ರಿಟಿಗಳನ್ನೂ ಈತ ಕರೆತರುತ್ತಿದ್ದ ಎಂದು ಮೂಲಗಳು ತಿಳಿಸಿವೆ.

“ಅನುಕಂಪದ ಉದ್ಯೋಗ’ ನಿಮಿತ್ತ!: ವಿಜಯನಗರದಲ್ಲಿ ಫ್ಲ್ಯಾಟ್‌ ಹೊಂದಿರುವ ರವಿಶಂಕರ್‌ಗೆ ಅನುಕಂಪದ ಆಧಾರದಲ್ಲಿ ಈ ನೌಕರಿ ಸಿಕ್ಕಿತ್ತು. ತಂದೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದರು. ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದರಿಂದ ಆ ನೌಕರಿ ಇವರಿಗೆ ಬಂದಿತ್ತು. ಈ “ಅನುಕಂಪದ ಉದ್ಯೋಗ’ ಅವರಿಗೆ ನಿಮಿತ್ತ. ಆದರೆ, ಇದು ಅವರಿಗೆ ಹತ್ತು ಹಲವು “ಲಿಂಕ್‌’ಗಳನ್ನು ಕೊಟ್ಟಿತ್ತು. ಪ್ರತಿಷ್ಠಿತರು ಖರೀದಿಸುವ ಐಷಾರಾಮಿ ಕಾರುಗಳಿಗೆ ಫ್ಯಾನ್ಸಿ ಅಥವಾ ಲಕ್ಕಿ ನಂಬರ್‌ ನೀಡಲು, ವಾಣಿಜ್ಯ ವಾಹನಗಳ ನೋಂದಣಿಮತ್ತಿತರ ವಿಭಾಗಗಳು ಪ್ರಮುಖ ಆದಾಯದ ಮೂಲಗಳು. ಇದನ್ನು ರವಿಶಂಕರ್‌ ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದರು. ಆ ಮೂಲಕ ಇತರೆ ವ್ಯವಹಾರಗಳಲ್ಲಿ ಸಕ್ರಿಯವಾಗಲು ಸಾಧ್ಯವಾಗಿತ್ತು ಎಂದು ಇಲಾಖೆ ಉನ್ನತ ಮೂಲಗಳು “ಉದಯವಾಣಿ’ಗೆ ಮಾಹಿತಿ ನೀಡಿವೆ.

ಅನುಮಾನ ಸೃಷ್ಟಿಸಿದ ಮೌನ!: ದಿನಕ್ಕೆ ಒಂದು ತಾಸು ಕೆಲಸಕ್ಕೆ ಬರುವ ರವಿಶಂಕರ್‌ ಹಾಗೂ ತನ್ನ ಕೆಲಸಕ್ಕಾಗಿ ಮೂವರನ್ನು ನಿಯೋಜಿಸಿರುವ ಬಗ್ಗೆ ಗೊತ್ತಿದ್ದರೂ ಇಲಾಖೆ ಮೇಲಧಿಕಾರಿಗಳು ಆತನ ವಿಚಾರದಲ್ಲಿ ಪ್ರಕರಣ ಬೆಳಕಿಗೆ ಬರುವವರೆಗೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈತನಿಗೆ ಬರುವ ಆದಾಯದಲ್ಲಿ ಕೆಲ ಮೇಲಧಿಕಾರಿ ಗಳಿಗೂ ಪಾಲು ಹೋಗುತ್ತಿತ್ತು ಎಂದೂ ಹೇಳಲಾಗುತ್ತಿದೆ.

Advertisement

ವರ್ಗಾವಣೆ ರದ್ಧತಿಗೆ ಪ್ರಭಾವ :  “ರವಿಶಂಕರ್‌ ಕೆಲಸಕ್ಕೆ ಹಾಜರಾದಾಗಿನಿಂದಲೂ ಸಾರಿಗೆ ಇಲಾಖೆಗೆ ಅತಿ ಹೆಚ್ಚು ಆದಾಯ ತಂದುಕೊಡುವ ಕೋರಮಂಗಲ, ಜಯನಗರ ಪ್ರಾದೇಶಿಕ ಸಾರಿಗೆ ಕಚೇರಿ ಬಿಟ್ಟು ಬೇರೆ ಕಡೆ ವರ್ಗಾವಣೆ ಆಗದಂತೆ ನೋಡಿಕೊಂಡಿದ್ದಾರೆ. ಈ ಹಿಂದೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದರಿಂದ ಅಮಾನತುಗೊಳಿಸಲು ಇಲಾಖೆ ಮೇಲಧಿಕಾರಿಗಳು ಮುಂದಾಗಿದ್ದರು. ಆದರೆ, ಬದಲಾಗಿ ಬಳ್ಳಾರಿ ಕಡೆಗೆ ವರ್ಗಾವಣೆ ಮಾಡಲಾಯಿತು. ಅದನ್ನು ರದ್ದುಗೊಳಿಸಲು ಹಲವು ಪ್ರಯತ್ನಗಳು ವಿಫ‌ಲವಾದವು. ಅದೇ ಸಮಯಕ್ಕೆ ಚುನಾವಣೆ ಬಂತು. ಈ ವೇಳೆ ಚುನಾವಣಾ ಕರ್ತವ್ಯಕ್ಕೆ ಹಾಕಿಸಿಕೊಂಡರು. 3ತಿಂಗಳಲ್ಲಿ ಪರಿಸ್ಥಿತಿ ತಿಳಿಯಾದ ನಂತರ ಪ್ರಭಾವ ಬೀರಿ ಜಯನಗರಕ್ಕೆ ಹಾಕಿಸಿಕೊಂಡರು. ದಿನಕ್ಕೆ ಒಂದೆರಡು ತಾಸು ಬಂದುಹೋಗುತ್ತಿದ್ದರು. ಯಾರೊಂದಿಗೂ ಹೆಚ್ಚು ಸೇರುತ್ತಿರಲಿಲ್ಲ. ಆಪ್ತರನ್ನು ಕೆಲವು ಸಲ ಪಾರ್ಟಿಗೆ ಕರೆದಿದ್ದೂ ಇದೆ’ ಎಂದು ಇಲಾಖೆ ಮೂಲಗಳು ತಿಳಿಸುತ್ತವೆ.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next