ಬೆಂಗಳೂರು: ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಸುಮಾರು 3.5 ಕೋಟಿ ರೂ.ಹವಾಲ ಹಣ ವರ್ಗಾವಣೆ ಮಾಡಿರುವುದು ಜಾರಿನಿರ್ದೇಶನಾಲಯದ ತನಿಖೆಯಲ್ಲಿ ಬಯಲಾಗಿದೆ.
ಡ್ರಗ್ಸ್ ದಂಧೆಗೆ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಬಿನೀಶ್ ಕೊಡಿಯೇರಿ ವಿಚಾರಣೆಯನ್ನು ನಡೆಸಿರುವ ಇ.ಡಿ ಅಧಿಕಾರಿಗಳಿಗೆ ಈ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಮೊಹಮದ್ ಅನೂಪ್ ಜತೆ ನಿಕಟ ಸಂಪರ್ಕ ಹೊಂದಿದ್ದ ಬಿನೀಶ್, ಹವಾಲ ದಂಧೆಯಲ್ಲಿ ತೊಡಗಿದ್ದ. ಈ ಪೈಕಿ 3.5 ಕೋಟಿ ಹವಾಲ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಅಷ್ಟೇ ಅಲ್ಲದೆ ಮೊಹಮದ್ ಅನೂಪ್ ನನ್ನು ಬೇನಾಮಿದಾರನ್ನಾಗಿ ಮಾಡಿಕೊಂಡು ಹಲವು ಸಂಸ್ಥೆಗಳನ್ನು ನಡೆಸಿದ್ದಾನೆ.ಅನೂಪ್ ನಡೆಸುತ್ತಿದ್ದ ಎಲ್ಲ ವ್ಯವಹಾರಗಳಿಗೂ ಕೂಡ ಹಣಕಾಸು ನೆರವು ಒದಗಿಸುತ್ತಿದ್ದ. ದುಬೈ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಇವರ ಸಹಭಾಗಿತ್ವದ ಹಣಕಾಸಿನ ವ್ಯವಹಾರ ನಡೆದಿವೆ ಎನ್ನಲಾಗಿದೆ.
ಮತ್ತೂಂದೆಡೆ ಆರೋಪಿ ಬಿನೀಶ್ ವಿರುದ್ಧ ದುಬೈನಲ್ಲಿ ಕೂಡ ಒಂದು ಪ್ರಕರಣವಿದೆ. ಕೇರಳ ಸೇರಿ ವಿವಿಧೆಡೆ ಹತ್ತು ಕ್ರಿಮಿನಲ್ ಪ್ರಕರಣಗಳಲ್ಲಿಯೂ ಬಿನೀಶ್ ಅರೋಪಿಯಾಗಿರುವುದು ಬಯಲಾಗಿದೆ. ಹಳೆ ಪ್ರಕರಣಗಳಲ್ಲಿ ಅಕ್ರಮ ಹಣವರ್ಗಾವಣೆಯ ಶಂಕೆಯ ಬಗ್ಗೆಯೂ ಇಡಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಡ್ರಗ್ಸ್ ಸೇವನೆ ಪ್ರಕರಣವೂ ಸಹ ಬಿನೀಶ್‌ಗೆ ಉರುಳಾಗುವ ಸಾಧ್ಯತೆಯಿದೆ.ಇ.ಡಿ ವಿಚಾರಣೆ ವೇಳೆ ಬಿನೀಶ್ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ, ಮೊಹಮದ್ ಅನೂಪ್ ಕೂಡ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ಮುಂದುವರಿಕೆ : ಪ್ರಕರಣದ ಹೆಚ್ಚಿನ ವಿಚಾರಣೆಗೆ ಬಿನೀಶ್‌ರನ್ನು ಇ.ಡಿ ವಶಕ್ಕೆ ಪಡೆದಿತ್ತು. ಸೋಮವಾರ ಕಸ್ಟಡಿ ಅವಧಿ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು, ಆರೋಪಿ ಬಿನೀಶ್‌ರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇ.ಡಿ ಪರವಾಗಿವಾದ ಮಂಡಿಸಿದ ಹಿರಿಯ ವಕೀಲ ಪಿ. ಪ್ರಸನ್ನಕುಮಾರ್, ” ಆರೋಪಿ ಈ ಹಿಂದಿನ ಕಸ್ಟಡಿ ಅವಧಿಯಲ್ಲಿ ವಿಚಾರಣೆಗೆ ಸರಿಯಾಗಿ ಸಹಕರಿಸಿಲ್ಲ.
ಆರೋಪಿಯಿಂದ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕಿದೆ. ಜತೆಗೆ, ಆರೋಪಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹೊಂದಿದ್ದಾನೆ. ಆರೋಪಿ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಹಾಗೂ ಡ್ರಗ್ಸ್ ದಂಧೆಯ ಆರೋಪಿಗಳ ಜತೆ ನಿಕಟ ಸಂಬಂಧಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಅರೋಪಿಯ ಕೂಲಂಕುಶ ವಿಚಾರಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ದಿನ ಇ.ಡಿ ವಶಕ್ಕೆ ನೀಡಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.ಈ ವಾದ ಪುರಸ್ಕರಿಸಿದ ನ್ಯಾಯಾಲಯ ಆರೋಪಿ ಬಿನೀಶ್‌ಗೆ ನ.7ರವರೆಗೆ ಇ.ಡಿ ವಶಕ್ಕೆ ನೀಡಿ ಆದೇಶಿಸಿತು.
–ಮಂಜುನಾಥ ಲಘುಮೇನಹಳ್ಳಿ