ನವದೆಹಲಿ: ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವೆಡೆ ಡ್ರಗ್ಸ್ ಜಾಲದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಿಜೋರಾಂನಲ್ಲಿ ಹೆರಾಯಿನ್ ಸೇವಿಸಿ ಕಳೆದ ವರ್ಷ 12 ಮಹಿಳೆಯರು ಸೇರಿದಂತೆ 54 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ನಾರ್ಕೋಟಿಕ್ಸ್ ಇಲಾಖೆ ತಿಳಿಸಿದೆ.
ಅತಿಯಾದ ಹೆರಾಯಿನ್ ಸೇವಿಸಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, ಉಳಿದವರು ವಿವಿಧ ರೀತಿಯ ಮಾದಕ ವಸ್ತು ಸೇವಿಸಿ ಕಳೆದ ವರ್ಷ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ದಾಖಲೆ ವಿವರಿಸಿದೆ.
ರಾಜ್ಯ ನಾರ್ಕೋಟಿಕ್ಸ್ ಇಲಾಖೆಯ ಅಧಿಕಾರಿಗಳ ಪ್ರಕಾರ, 2019ರಲ್ಲಿ 12.5 ಕೆಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷ ಮಾದಕ ವಸ್ತು ಮತ್ತು ಮದ್ಯ ಸೇವನೆ ಸಂಬಂಧಿತ ಪ್ರಕರಣದಲ್ಲಿ 35 ವಿದೇಶಿಯರು ಸೇರಿದಂತೆ 3,254 ಮಂದಿಯನ್ನು ಬಂಧಿಸಲಾಗಿತ್ತು ಎಂದು ವರದಿ ಹೇಳಿದೆ.
2015ರವರೆಗೆ ಕ್ಲಿನಿಕಲ್ (ಔಷಧಾಲಯ) ಡ್ರಗ್ಸ್ ಸ್ಪಾಸ್ಮೋ ಪ್ರಾಕ್ಸಿಯಾವೊನ್ ಮತ್ತು ಪಾರ್ವೋನ್ ಸ್ಪಾಸ್ (ನೋವು ನಿವಾರಕ ಮಾತ್ರೆ) ಸೇವನೆಯಿಂದ ರಾಜ್ಯದಲ್ಲಿ ಸಾವಿನ ಪ್ರಕರಣ ವರದಿಯಾಗುತ್ತಿತ್ತು. ಬಳಿಕ ನೆರೆಯ ಮ್ಯಾನ್ಮಾರ್ ದೇಶದಿಂದ ಹೆರಾಯಿನ್ ಸರಬರಾಜು ಆಗಲು ಪ್ರಾರಂಭಿಸಿದ ನಂತರ ಮಿಜೋರಾಂನಲ್ಲಿ ಹೆರಾಯಿನ್ ಸೇವನೆ ಸಂಬಂಧಿತ ಸಾವಿನ ಪ್ರಕರಣಗಳು ಹೆಚ್ಚಾಗಿರುವುದಾಇ ಅಧಿಕಾರಿಗಳು ತಿಳಿಸಿದ್ದಾರೆ.
ಮಿಜೋರಾಂನಲ್ಲಿ 1984ರಿಂದಲೂ ಮಾದಕ ವಸ್ತು ಜಾಲ ಬೇರೂರ ತೊಡಗಿತ್ತು. ಇದಕ್ಕೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಪ್ರಭಾವ ಮುಖ್ಯವಾಗಿತ್ತು. ಎರಡು ದೇಶಗಳ ಸುಮಾರು 820 ಕಿಲೋ ಮೀಟರ್ ಅಂತಾರಾಷ್ಟ್ರೀಯ ಗಡಿಯನ್ನು ಮಿಜೋರಾಂ ಹೊಂದಿದೆ. ಈ ಎರಡು ದೇಶಗಳಿಂದ ಮಿಜೋರಾಂಗೆ ಸಾಕಷ್ಟು ಮಾದಕ ದ್ರವ್ಯ ಕಳ್ಳಸಾಗಣೆಯಾಗುತ್ತಿದೆ. ಈ ಕಳ್ಳಸಾಗಣೆ ತಡೆಯಲು ಮಿಜೋರಾಂ ಸರ್ಕಾರ ಭಾರೀ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಂಡಿತ್ತು. ಆದರೂ ಮಾದಕ ವಸ್ತು ಕಳ್ಳಸಾಗಣೆ ತಡೆಯುವಲ್ಲಿ ಪೂರ್ಣ ಯಶಸ್ವಿ ಸಿಕ್ಕಿರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.
1984ರಿಂದ ಮಿಜೋರಾಂನಲ್ಲಿ ಈವರೆಗೆ ಡ್ರಗ್ಸ್ ಸೇವನೆಯಿಂದ 184 ಮಹಿಳೆಯರು ಸೇರಿದಂತೆ 1,578 ಮಂದಿ ಸಾವನ್ನಪ್ಪಿದ್ದಾರೆ ಎಂದು ನಾರ್ಕೋಟಿಕ್ಸ್ ಇಲಾಖೆಯ ಅಂಕಿ ಅಂಶ ವಿವರಿಸಿದೆ.