Advertisement

ಡಾ. ರಾಜಕುಮಾರ್‌ ಸೌಹಾರ್ದ ಪ್ರಶಸ್ತಿ ಪ್ರದಾನ

06:10 AM Dec 07, 2018 | Team Udayavani |

ಬೆಂಗಳೂರು: ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ನೀಡಲಾಗುವ ಡಾ. ರಾಜಕುಮಾರ್‌ ಸೌಹಾರ್ದ ಪ್ರಶಸ್ತಿಯನ್ನು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜಕುಮಾರ್‌ ಪುಣ್ಯ ಭೂಮಿಯಲ್ಲಿ ಗುರುವಾರ ಪ್ರದಾನ ಮಾಡಲಾಯಿತು. 

Advertisement

ಪ್ರತಿವರ್ಷ ನೀಡುತ್ತ ಬಂದಿರುವ ಈ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರದಾನ ಮಾಡಿರಲಿಲ್ಲ. ಈ ಬಾರಿ ಮೂರು ವರ್ಷದ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜಕುಮಾರ್‌ ಜನ್ಮದಿನದಂದು ಪುರಸ್ಕೃತರಿಗೆ ಏಕಕಾಲದಲ್ಲಿ ಪ್ರದಾನ ಮಾಡಲಾಯಿತು.

2016ನೇ ಸಾಲಿನ ಡಾ. ರಾಜಕುಮಾರ್‌ ಸೌಹಾರ್ದ ಪ್ರಶಸ್ತಿಗೆ ಹಿರಿಯ ನಟಿ ಜಯಂತಿ, ಹಿರಿಯ ನಿರ್ದೇಶಕ ವಿಜಯ ರೆಡ್ಡಿ ಮತ್ತು ಹಿರಿಯ ಸಂಗೀತ ನಿರ್ದೇಶಕ ರಾಜನ್‌ ಭಾಜನರಾದರು. 2017ನೇ ಸಾಲಿನಲ್ಲಿ ಹಿರಿಯ ನಟರಾದ ಲೋಕನಾಥ್‌, ರಾಜೇಶ್‌ ಮತ್ತು ಹಿರಿಯ ನಿರ್ದೇಶಕ ಸಿ.ವಿ ಶಿವಶಂಕರ್‌ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. 2018ನೇ ಸಾಲಿನಲ್ಲಿ ಹಿರಿಯ ನಟಿ ಬಿ. ಜಯಾ, ಹಿರಿಯ ನಟ ಎಂ.ಎಸ್‌ ಉಮೇಶ್‌, ಹಿರಿಯ ಸಂಕಲನಕಾರ ಎಸ್‌. ಮನೋಹರ್‌ ಅವರಿಗೆ ಪ್ರಶಸ್ತಿ ಒಲಿದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಇದೇ ವೇಳೆ ಮಾತನಾಡಿದ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌, ಅಪ್ಪಾಜಿ ಮತ್ತು ಅಮ್ಮ ಇಬ್ಬರೂ ಇದೇ ಜಾಗದಲ್ಲಿ ಭೂಗರ್ಭ ಸೇರಿದ್ದಾರೆ. ಇಂದು ನಮ್ಮ ತಾಯಿಯವರ ಜನ್ಮದಿನವಾಗಿದ್ದು, ಅವರ ಆಸೆಯಂತೆ ಅವರೇ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಅವರ ಜನ್ಮದಿನದಂದೇ ಚಿತ್ರರಂಗದ ಸಾಧಕರಿಗೆ ನೀಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ರಾಜಕುಮಾರ್‌ ಕುಟುಂಬದ ಸದಸ್ಯರು, ಚಿತ್ರರಂಗದ ಅನೇಕ ಕಲಾವಿದರು, ಗಣ್ಯರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next